ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ ಭಾರತದೆಲ್ಲೆಡೆ 22 ನಕಲಿ ವಿಶ್ವವಿದ್ಯಾಲಯಗಳನ್ನು ಗುರುತಿಸಿ, ಅವುಗಳನ್ನು ಅಧಿಕೃತ ಮಾನ್ಯತೆ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳೆಂದು ಘೋಷಿಸಿದೆ. ಈ ವಿಶ್ವವಿದ್ಯಾಲಯಗಳು ಯುಜಿಸಿ ಕಾಯ್ದೆ, 1956ರ ಅಡಿಯಲ್ಲಿ ಯಾವುದೇ ಕಾನೂನು ಮಾನ್ಯತೆ ಪಡೆದಿಲ್ಲ ಹಾಗೂ ನೀಡುತ್ತಿರುವ ಪದವಿಗಳು ಶೈಕ್ಷಣಿಕ ಅಥವಾ ವೃತ್ತಿಪರವಾಗಿ ಅಮಾನ್ಯವೆಂದು ಆಯೋಗ ಸ್ಪಷ್ಟಪಡಿಸಿದೆ.
ಯುಜಿಸಿಯ ಇತ್ತೀಚಿನ ಅಕ್ಟೋಬರ್ 2025ರ ಪಟ್ಟಿಯ ಪ್ರಕಾರ, ದೆಹಲಿಯಲ್ಲೇ ಅತಿ ಹೆಚ್ಚು ನಕಲಿ ವಿಶ್ವವಿದ್ಯಾಲಯಗಳು ಪತ್ತೆಯಾಗಿವೆ. ದೆಹಲಿಯ ಕೋಟ್ಲಾ ಮುಬಾರಕ್‌ಪುರದಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಎಂಜಿನಿಯರಿಂಗ್ ಸೇರಿದಂತೆ 10ಕ್ಕೂ ಹೆಚ್ಚು ಸಂಸ್ಥೆಗಳು ಮಾನ್ಯತೆ ಇಲ್ಲದೆ ಪದವಿಗಳನ್ನು ನೀಡುತ್ತಿರುವುದು ಬಹಿರಂಗವಾಗಿದೆ.
ಯುಜಿಸಿ ಹೇಳಿಕೆ ಪ್ರಕಾರ, ಈ ಸಂಸ್ಥೆಗಳು ಯಾವುದೇ ಕೇಂದ್ರ ಅಥವಾ ರಾಜ್ಯ ಕಾಯ್ದೆಯಡಿಯಲ್ಲಿ ಸ್ಥಾಪನೆಯಾಗಿಲ್ಲ ಮತ್ತು ಯುಜಿಸಿ ಕಾಯ್ದೆಯ ಸೆಕ್ಷನ್ 2(ಎಫ್) ಅಥವಾ 3ರ ಅಡಿಯಲ್ಲಿ ಮಾನ್ಯತೆ ಪಡೆದಿಲ್ಲ. ಆದ್ದರಿಂದ, ಇವು ನೀಡುವ ಪದವಿಗಳು ಶಿಕ್ಷಣ ಅಥವಾ ಉದ್ಯೋಗ ಉದ್ದೇಶಗಳಿಗೆ ಅಮಾನ್ಯ. ವಿದ್ಯಾರ್ಥಿಗಳು ಈ ಸಂಸ್ಥೆಗಳ ಮೋಸಕ್ಕೆ ಒಳಗಾಗದಂತೆ ಎಚ್ಚರಿಕೆ ನೀಡಲಾಗಿದೆ.


