ಚಿಕ್ಕೋಡಿ:ಕೆರೂರ, ಕಾಡಾಪುರ ಜೋಡಕುರಳಿ, ಬಸನಾಳಗಡೆ ನನದಿ ಗ್ರಾಮಗಳಿಗೆ ಕೃಷ್ಣಾ ನದಿಯಿಂದ ನೇರವಾಗಿ ಪೈಪ್ಲೈನ್ ಮುಖಾಂತರ ನೀರು ಯೋಜನೆ ಅನುಷ್ಠಾನಕ್ಕಾಗಿ 210 ಕೋಟಿ ರೂಪಾಯಿಗಳ ಅನುದಾನಕ್ಕೆ ಮುಂದಿನ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಯಲ್ಲಿ ತಾಂತ್ರಿಕ ಅನುಮತಿ ಸಿಗಲಿದೆ, ಮುಂದಿನ ಕೆಲವೇ ದಿನಗಳಲ್ಲಿ ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಪ್ರಕಾಶ ಹುಕ್ಕೇರಿ ಅವರ ನೇತೃತ್ವದಲ್ಲಿ ಶಂಕು ಸ್ಥಾಪನೆ ಮಾಡಲಾಗುವುದು ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
2 ಕೋಟಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಕೆರೂರ ಜೋಡಕುರಳಿ ರಸ್ತೆಯ ಕಾಮಗಾರಿಗೆ ಹಾಗೂ ಸಂಚಾರಿ ಆರೋಗ್ಯ ಘಟಕದ ಬಸಗೆ ಚಾಲನೆ ನೀಡಿ ಮಾತನಾಡಿದರು. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಬಹುದು ಎಂದು ಭಯವಿತ್ತು, ಆದರೆ ಸರ್ಕಾರ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿದ್ದು, ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸುತ್ತೇನೆ. ಕೆರೂರ ಗ್ರಾಮದಲ್ಲಿ 33 ಕೆ ವಿ ವಿದ್ಯುತ್ ಸ್ಟೇಷನವನ್ನು 110 ಕೆ ವಿ ಸ್ಟೇಷನ್ ಎಂದು ಮೇಲ್ದೆರ್ಜೆಸಲು ಮಂಜೂರಾಗಿದೆ.
ಅದೇ ರೀತಿ ಪಟ್ಟಣಕೊಡಿಯಲ್ಲಿ ಸಹ 33 ಕೆ ವಿ ದಿಂದ 110 ಕೆ ವಿ ಕೆ ವಿ ಸ್ಟೇಶನ್ ಮೇಲ್ದರ್ಜೆಗೆ ಎರಿಸಲಾಗಿದೆ.ನಾಗರಾಳ ಗ್ರಾಮದಲ್ಲಿ ನೂತನ ವಿದ್ಯುತ್ ಸ್ಟೇಷನ್ ನಿರ್ಮಾಣಕ್ಕಾಗಿ ನಾವು ವೈಯಕ್ತಿಕವಾಗಿ 10 ಎಕರೆ ಭೂಮಿ ನೀಡಿದ್ದೇವೆ. ಎಲ್ಲಾ ನೀರಾವರಿ ಯೋಜನೆಗಳಿಗೆ ವಿದ್ಯುತ್ ಪೂರೈಕೆಗೆ ವ್ಯತ್ಯಯ ಆಗಬಾರದು ಹಾಗೂ ರೈತರಿಗೆ ನಾಗರಿಕರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
ಮುಖಂಡರಾದ ಮಲ್ಲಿಕಾರ್ಜುನ ಪಾಟಿಲ ಮಾತನಾಡಿ ಕೆರೂರ ಗ್ರಾಮಕ್ಕೆ ಶಾಸಕ ಗಣೇಶ ಹುಕ್ಕೇರಿ ಹಾಗೂ ಎಂಎಲ್ಸಿ ಪ್ರಕಾಶ ಹುಕ್ಕೇರಿ ಅವರು ಐದು ಕೋಟಿ ರೂಪಾಯಿಗಳ ಅನುದಾನ ನೀಡಿದ್ದಾರೆ. ಮುಂದಿನ ದಿನಮಾನಗಳಲ್ಲಿ ಇನ್ನೂ 5 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದರು. ಕೃಷಿ ಪತ್ತಿನ ಬ್ಯಾಂಕುಗಳಿಗೆ 30 ಲಕ್ಷ ರೂಪಾಯಿ ವೆಚ್ಚದಲ್ಲಿ 2 ಗೋದಾಮುಗಳನ್ನ ನಿರ್ಮಿಸಿದ್ದಾರೆ.
ನಿವೃತ್ತ ಶಿಕ್ಷಕ ರಾಜೇಸಾಬ ಸಯ್ಯ ಮಾತನಾಡಿ ವಿಧಾನಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರು ಈ ಭಾಗದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.ಇಂತಹ ಶಾಸಕರನ್ನು ಪಡೆದಿದ್ದು ನಮ್ಮೆಲ್ಲರ ಭಾಗ್ಯ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ವೀರೇಂದ್ರ ಪಾಟೀಲ, ರವಿ ಪಾಟೀಲ, ಮಲ್ಲಪ್ಪ ಬಾಗಿ, ವಿಠ್ಠಲ ವಾಳಕೆ, ಶಿವಪ್ಪ ಪೂಜಾರಿ, ವಿಠ್ಠಲ ಬೀಳಗಿ, ಸಂಭಾಜಿ ಹಕ್ಯಾಗೋಳ ಮಹೇಶ ಪಾಟೀಲ, ಖಾನಪ್ಪ ಬಾಡಕರ, ಸೋಮಶೇಖರ ಸಂಕಪಾಳ , ಸುರೇಶ್ ಬಾಡಕರ, ಶಿವಾನಂದ ನಾಗನೂರೆ, ಪಿಡಿಓ ವಿನೋದ ಅಸೋದೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.