ಶ್ರೀನಗರ: ಜಮ್ಮು ಕಾಶ್ಮೀರದ ಅಖ್ನೂರ್ ಪ್ರದೇಶದ ಜಮ್ಮು- ಪೂಂಚ್ ಹೆದ್ದಾರಿಯ ತಾಂಡಾ ಮೋರ್ನಲ್ಲಿ ಆಳವಾದ ಕಮರಿಗೆ ಬಸ್ ಉರುಳಿದ ಪರಿಣಾಮ 21 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಸುಮಾರು 60 ಜನರು ಗಾಯಗೊಂಡಿದ್ದಾರೆ. ಈ ಘಟನೆ ನಡೆದ ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಉತ್ತರ ಪ್ರದೇಶದ ಹತ್ರಾಸ್ನಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಜಮ್ಮುವಿನ ಅಖ್ನೂರ್ ತಾಂಡಾ ಬಳಿ ಅಪಘಾತಕ್ಕೀಡಾಗಿದೆ. ಇಂದು ಜಮ್ಮು ರೈಲು ನಿಲ್ದಾಣದಲ್ಲಿ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ನ ಇಂಜಿನ್ ಹಳಿತಪ್ಪಿದ ಕೆಲವೇ ಗಂಟೆಗಳ ನಂತರ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ 60 ಜನರಿಗೆ ಗಾಯಗಳಾಗಿವೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಬಸ್ನಲ್ಲಿ ಉತ್ತರ ಪ್ರದೇಶದ ಹತ್ರಾಸ್ನಿಂದ ಪ್ರಯಾಣಿಕರು ತೆರಳುತ್ತಿದ್ದರು. ಅವರು ಜಮ್ಮುವಿನಿಂದ ರಿಯಾಸಿ ಜಿಲ್ಲೆಯ ಶಿವ ಖೋರಿ ದೇಗುಲಕ್ಕೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಜಮ್ಮು-ಪೂಂಚ್ ಹೆದ್ದಾರಿಯ ಕಾಳಿ ಧಾರ್ ಮಂದಿರದ ಬಳಿ ಬಸ್ ಕಮರಿಗೆ ಬಿದ್ದಿದೆ. ಗಾಯಾಳುಗಳನ್ನು ಅಖ್ನೂರ್ನ ಸ್ಥಳೀಯ ಆಸ್ಪತ್ರೆಗೆ ಮತ್ತು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ.