ಚಂಡೀಗಢ: ಕೊಲೆ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೈಲುಪಾಲಾಗಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್’ಗೆ ಮತ್ತೆ 21 ದಿನಗಳ ಪೆರೋಲ್ ನೀಡಲಾಗಿದೆ.
ಈ ಮೂಲಕ ಕಳೆದ 4 ವರ್ಷಗಳಲ್ಲಿ ಇದು ಹತ್ತನೇ ಬಾರಿ ಜೈಲಿನಿಂದ ಹೊರ ಬಂದಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಗುರ್ಮೀತ್ ಅವರು ಬಾಗ್ಪತ್ನ ಬರ್ನಾವಾದಲ್ಲಿರುವ ಡೇರಾ ಆಶ್ರಮದಲ್ಲಿ ತಂಗಲಿದ್ದಾರೆಂದು ಮೂಲಗಳು ತಿಳಿಸಿವೆ.
56 ವರ್ಷದ ರಾಮ್ ರಹೀಮ್, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಗಮನಾರ್ಹ ಅನುಯಾಯಿಗಳನ್ನು ಹೊಂದಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ಭೇಟಿ ಮಾಡಲು ಮನವಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಎಂಟು ಪ್ರತ್ಯೇಕ ಸಂದರ್ಭಗಳಲ್ಲಿ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಫರ್ಲೋ ಮತ್ತು ಪೆರೋಲ್ ನಡುವ ಸ್ವಲ್ಪ ವ್ಯತ್ಯಾಸ ಇದೆ. ಪೆರೋಲ್ ಎಂದರೆ ತಾತ್ಕಾಲಿಕವಾಗಿ ವಿಶೇಷ ಉದ್ದೇಶಕ್ಕಾಗಿ ಅಥವಾ ಶಿಕ್ಷೆಯ ಅವಧಿ ಮುಗಿಯುವ ಮೊದಲು ಸಂಪೂರ್ಣವಾಗಿ ಬಿಡುಗಡೆ ಮಾಡುವುದು. ಉತ್ತಮ ನಡವಳಿಕೆಯ ಕೈದಿಗಳನ್ನು ಈ ರೀತಿ ಬಿಡುಗಡೆ ಮಾಡಲಾಗುತ್ತದ. ಫರ್ಲೋ ಎಂದರೆ ಜೈಲಿನಿಂದ ಅಪರಾಧಿಗಳ ಅಲ್ಪಾವಧಿಯ ತಾತ್ಕಾಲಿಕ ಬಿಡುಗಡೆಯಾಗಿದೆ.
ಸಿರ್ಸಾ ಆಶ್ರಮದಲ್ಲಿ ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ರಾಮ್ ರಹೀಮ್ ಅಕ್ಟೋಬರ್ 18, 2021 ರಂದು ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಗುರ್ಮೀತ್ ರಾಮ್ ರಹೀಮ್ ದೋಷಿ ಎಂದು ತೀರ್ಪು ನೀಡಿತ್ತು. ನ್ಯಾಯಾಲಯ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.