ನವದೆಹಲಿ: ಮುಂಬರುವ ದಸರಾ, ದೀಪಾವಳಿ ಮತ್ತು ಛತ್ ಹಬ್ಬಗಳ ವೇಳೆ ನೀವು ರೈಲು ಟಿಕೆಟ್ ಬುಕ್ ಮಾಡಲು ಯೋಜಿಸುತ್ತಿದ್ದರೆ, ಭಾರತೀಯ ರೈಲ್ವೆ ನಿಮಗಾಗಿ ‘ರೌಂಡ್ ಟ್ರಿಪ್ ಪ್ಯಾಕೇಜ್’ ಯೋಜನೆಯನ್ನು ಪರಿಚಯಿಸುತ್ತಿದೆ. ಇದರಲ್ಲಿ ಪ್ರಯಾಣಿಕರು ಹಿಂದಿರುಗುವ ಪ್ರಯಾಣದ ಮೂಲ ದರದಲ್ಲಿ ಶೇ.20 ರಷ್ಟು ರಿಯಾಯಿತಿ ಪಡೆಯಬಹುದು.
ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸಲು, ತೊಂದರೆ-ಮುಕ್ತ ಬುಕಿಂಗ್‌ಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಹಬ್ಬದ ವೇಳೆ ವಿಶೇಷ ರೈಲುಗಳನ್ನು ಬಳಸಿಕೊಳ್ಳಲು ಈ ಯೋಜನೆಯನ್ನು ಆರಂಭದಲ್ಲಿ ಪ್ರಾಯೋಗಿಕವಾಗಿ ರೂಪಿಸಲಾಗಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ದಸರಾ, ದೀಪಾವಳಿ ಮತ್ತು ಛತ್ ಪೂಜೆಯಂತಹ ಹಬ್ಬದ ಋತುವಿನಲ್ಲಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು, ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು ಮತ್ತು ವಿಶೇಷ ರೈಲುಗಳು ಸೇರಿದಂತೆ ಎರಡೂ ಕಡೆಯಿಂದ ರೈಲುಗಳ ಬಳಕೆಯನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
“ಹಬ್ಬದ ಸಮಯದಲ್ಲಿ ಹೆಚ್ಚಿರುವ ಪ್ರಯಾಣಿಕರಿಗಾಗಿ ರಿಯಾಯಿತಿ ದರದಲ್ಲಿ ರೌಂಡ್ ಟ್ರಿಪ್ ಪ್ಯಾಕೇಜ್ ಎಂಬ ಪ್ರಾಯೋಗಿಕ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ. ನಿಗದಿತ ಅವಧಿಯಲ್ಲಿ ತಮ್ಮ ವಾಪಸಾತಿ ಪ್ರಯಾಣವನ್ನು ಆಯ್ಕೆ ಮಾಡುವ ಪ್ರಯಾಣಿಕರಿಗೆ ಈ ಯೋಜನೆ ಅನ್ವಯಿಸುತ್ತದೆ” ಎಂದು ಹೇಳಿದ್ದಾರೆ.