ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಲಷ್ಕರ್ -ಇ-ತೊಯ್ಬಾ (LET)ಪಾಕ್ ಗುಪ್ತಚರ ಸಂಸ್ಥೆ ISI ಮತ್ತು ಪಾಕಿಸ್ತಾನ ಸೇನೆಯ ಕೈವಾಡವಿದ್ದು, ಉಗ್ರರಿಗೆ ನೆರವು ನೀಡಿದ ಕಾಶ್ಮೀರ ಕಣಿವೆಯಲ್ಲಿನ ಸುಮಾರು 20 ಸ್ಥಳೀಯ ಮಟ್ಟದ ಕಾರ್ಯಕರ್ತರು (OGWs)ಭಾಗಿಯಾಗಿರುವುದನ್ನು ರಾಷ್ಟ್ರೀಯ ತನಿಖಾ ದಳ (NIA)ಪ್ರಾಥಮಿಕ ತನಿಖೆಯು ದೃಢಪಡಿಸಿದೆ. ಸದ್ಯ ಉಗ್ರರಿಗೆ ನೆರವು ನೀಡಿದವರ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ನೆರವು ನೀಡಿದವರಲ್ಲಿ ಪ್ರಮುಖರಾದ ನಿಸಾರ್ ಅಹ್ಮದ್ ಅಲಿಯಾಸ್ ಹಾಜಿ ಮತ್ತು ಮುಷ್ತಾಕ್ ಹುಸೇನ್ ಅವರನ್ನು ವಿಚಾರಣೆಗೆ ಎನ್ ಐಎ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಇವರಿಬ್ಬರೂ ಪ್ರಸ್ತುತ ಜಮ್ಮುವಿನ ಕೋಟ್ ಭಲ್ವಾಲ್ ಜೈಲಿನಲ್ಲಿದ್ದಾರೆ. ಇವರಿಬ್ಬರೂ ಎಲ್ಇಟಿಯ ಸಹಚರರಾಗಿದ್ದು, ಈ ಹಿಂದೆ 2023 ರಲ್ಲಿ ಭಟ ಧುರಿಯನ್ ಮತ್ತು ತೋಟಗಲಿ ಪ್ರದೇಶಗಳಲ್ಲಿ ಸೇನಾ ಬೆಂಗಾವಲು ಪಡೆಗಳ ಮೇಲಿನ ದಾಳಿಯ ಉಗ್ರರಿಗೆ ನೆರವಾಗಿದ್ದಕ್ಕೆ ಬಂಧಿಸಲ್ಪಟ್ಟಿದ್ದಾರೆ” ಎಂದು ಮೂಲವೊಂದು ತಿಳಿಸಿದೆ.
ಪಾಕ್ ಸೇನೆ, ಗುಪ್ತಚರ ಸಂಸ್ಥೆ ನಿರ್ದೇಶನ: ಪಾಕಿಸ್ತಾನದ ISI, ಸೇನೆಯ ನಿರ್ದೇಶನದಂತೆ ಸ್ಥಳೀಯರ ನೆರವು ಪಡೆದು LET ಉಗ್ರ ಸಂಘಟನೆ ದಾಳಿ ನಡೆಸಿದೆ ಎಂದು ರಾಷ್ಟ್ರೀಯ ತನಿಖಾ ದಳ ತನ್ನ ವರದಿಯಲ್ಲಿ ಹೇಳಿದೆ.
ಹಶ್ಮಿ ಮೂಸಾ (ಅಲಿಯಾಸ್ ಸುಲೇಮಾನ್) ಮತ್ತು ಅಲಿ ಭಾಯಿ (ಅಲಿಯಾಸ್ ತಲ್ಹಾ ಭಾಯ್) ಎಂದು ಗುರುತಿಸಲಾದ ಇಬ್ಬರು ಪ್ರಮುಖ ಶಂಕಿತರು ಪಾಕಿಸ್ತಾನಿ ಪ್ರಜೆಗಳು ಎಂದು ದೃಢಪಡಿಸಲಾಗಿದೆ. ಇವರಿಬ್ಬರೂ ಪಾಕಿಸ್ತಾನಿ ಮೂಲದ ಹ್ಯಾಂಡ್ಲರ್ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ದಾಳಿ ಸಮಯ ಮತ್ತು ಕಾರ್ಯಾಚರಣೆ ಬಗ್ಗೆ ನಿರ್ದಿಷ್ಟ ಸೂಚನೆಗಳನ್ನು ಪಡೆಯುತ್ತಿದ್ದರು ಎಂದು ಬಂಧಿಸಲ್ಪಟ್ಟಿರುವ ಸ್ಥಳೀಯ ಕಾರ್ಯಕರ್ತರ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಮೂಲಗಳು ಹೇಳಿವೆ.
ದಾಳಿಗೂ ಒಂದು ವಾರ ಮುಂಚೆ ಕಾಶ್ಮೀರಕ್ಕೆ ಬಂದಿದ್ದ ಉಗ್ರರು: ದಾಳಿಗೂ ಒಂದು ವಾರ ಮುಂಚೆ ಉಗ್ರರು ಕಾಶ್ಮೀರ ಪ್ರವೇಶಿಸಿದ್ದು, ಸ್ಥಳೀಯರ (OGW) ನೆರವು ಪಡೆದಿದ್ದಾರೆ. ಅವರಿಗೆ ಆಶ್ರಯ, ಸಾಗುವ ಮಾರ್ಗ, ಮುನ್ನೆಚ್ಚರಿಕೆಗಳು ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡಿದ್ದರು. ಏಪ್ರಿಲ್ 15 ರ ಸುಮಾರಿಗೆ ಪಹಲ್ಗಾಮ್ಗೆ ಬಂದಿದ್ದ ಉಗ್ರರು, ಬೈಸರನ್, ಆರು, ಬೇತಾಬ್ ಕಣಿವೆ ಮತ್ತು ಸ್ಥಳೀಯ ಅಮ್ಯೂಸ್ಮೆಂಟ್ ಪಾರ್ಕ್ ಸೇರಿದಂತೆ ನಾಲ್ಕು ಸಂಭಾವ್ಯ ತಾಣಗಳಲ್ಲಿ ವಿವರವಾದ ಪರಿಶೀಲನೆ ನಡೆಸಿದ್ದರು. ಆದರೆ ಭದ್ರತಾ ಸಿಬ್ಬಂದಿ ಕೊರತೆ ಕಾರಣದಿಂದ ಬೈಸರನ್ ಪ್ರದೇಶವನ್ನು ದಾಳಿಗೆ ಆಯ್ಕೆ ಮಾಡಿಕೊಂಡಿದ್ದರು ಎಂದು ಎಂದು ರಾಷ್ಟ್ರೀಯ ತನಿಖೆ ವೇಳೆ ತಿಳಿದುಬಂದಿದೆ.ತನಿಖಾಧಿಕಾರಿಗಳು ಅಪರಾಧ ಸ್ಥಳದಿಂದ 40 ಕ್ಕೂ ಹೆಚ್ಚು ಕಾಟ್ರಿಡ್ಜ್ಗಳನ್ನು ವಶಪಡಿಸಿಕೊಂಡಿದ್ದು, ಅವುಗಳನ್ನು ರಾಸಾಯನಿಕ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ ಎಂದು ಎನ್ಐಎ ದೃಢಪಡಿಸಿದೆ.
ಒಟ್ಟಾರೇ, 2,800 ಮಂದಿಯ ವಿಚಾರಣೆ: ಎನ್ ಐಎ ಅಧಿಕಾರಿಗಳು ದಾಳಿ ನಡೆದ ಸ್ಥಳದ 3ಡಿ ಮ್ಯಾಪಿಂಗ್ ನಡೆಸಿದ್ದು, ಮೊಬೈಲ್ ಟವರ್ ನಲ್ಲಿ ದಾಖಲಾದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ದಾಳಿ ವೇಳೆ ಬೈಸರನ್ ಸುತ್ತಮುತ್ತ ಮೂರು ಸ್ಯಾಟಲೈಟ್ ಫೋನ್ ಗಳು ಕಾರ್ಯ ನಿರ್ವಹಿಸಿದ್ದು, ಎರಡು ಫೋನ್ ಗಳ ಸಿಗ್ನಲ್ ಗಳನ್ನು ಗುರುತಿಸಿ ವಿಶ್ಲೇಷಿಸಲಾಗುತ್ತಿದೆ.
ಒಟ್ಟಾರೇ ಸುಮಾರು 2,800 ವ್ಯಕ್ತಿಗಳನ್ನು ಎನ್ ಐಎ ಮತ್ತು ತನಿಖಾ ಏಜೆನ್ಸಿ ವಿಚಾರಣೆಗೊಳಪಡಿಸಿದೆ. ಇಲ್ಲಿವರೆಗೂ 150ಕ್ಕೂ ಹೆಚ್ಚು ವ್ಯಕ್ತಿಗಳು ಇನ್ನೂ ಕಸ್ಟಡಿಯಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇವರಲ್ಲಿ ಜಮತ್-ಇ-ಇಸ್ಲಾಮಿ , ಹುರಿಯತ್ ಮತ್ತಿತರ ನಿಷೇಧಿತ ಉಗ್ರ ಸಂಘಟನೆಗಳ ಶಂಕಿತರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.