ಬೆಳಗಾವಿ: ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಜಮೀನು ಕಳೆದುಕೊಂಡವರಿಗೆ 20 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಧಾರವಾಡ ಹೈಕೋರ್ಟ್ ನೀಡಿರುವ ತೀರ್ಪಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಶಿವಾಜಿ ಗಾರ್ಡನ್ನಿಂದ ಓಲ್ಡ್ ಪಿಬಿ ರಸ್ತೆವರೆಗೆ ಸಿಸಿ ರಸ್ತೆ ಕಾಮಗಾರಿಯನ್ನು ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆದಿತ್ತು. ಈ ವೇಳೆ ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿದ್ದು, ರಸ್ತೆ ನಿರ್ಮಿಸುವ ವೇಳೆ ಜಮೀನು ಕಳೆದುಕೊಂಡವರಿಗೆ ಈಗ ಹೈಕೋರ್ಟ್ 20 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶಿಸಿದೆ. ಪ್ರಕರಣದ ತನಿಖೆಯ ವೇಳೆ ಮಹಾನಗರ ಪಾಲಿಕೆಯ ಆಯುಕ್ತರು ಜಿಲ್ಲಾಧಿಕಾರಿಗಳ ಗಮನಕ್ಕೆ ತರದೇ, ಒಪ್ಪಿಗೆ ಸೂಚಿಸಿದ್ದಾರೆ. ಅವರ ವಿರುದ್ಧ ತನಿಖೆಯಾಗಬೇಕು. ಈ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಗ್ರ ತನಿಖೆಯಾಗಬೇಕು ಎಂದು ತಿಳಿಸಿದರು.
ರಸ್ತೆ ನಿರ್ಮಿಸಿದವರು ಸ್ಮಾರ್ಟ ಸಿಟಿಯವರು. ಅವರೇ ಪರಿಹಾರ ನೀಡಬೇಕಾಗಿತ್ತು . ಆದರೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರದೇ ಸರ್ವಾಧಿಕಾರ ನೀತಿ ಅನುಸರಿಸಿದ್ದಾರೆ. ಈ ಕುರಿತು ಕಾನೂನು ಹೋರಾಟ ನಡೆಸಲಾಗುವುದು. ಇನ್ನು ಇಂತಹ ಪ್ರಕರಣಗಳು ಬಾಕಿ ಇವೆ. ಆಡಳಿತ ಪಕ್ಷದವರು ಪಾಲಿಕೆಯ ಸಭೆಯಲ್ಲಿ ಚರ್ಚಿಸಿ ತಪ್ಪಿತಸ್ಥರನ್ನು ಕಂಡು ಹಿಡಿಯಬೇಕಾಗಿತ್ತು. ನಿನ್ನೆಯ ಸಭೆಯಲ್ಲಿ ಪಾಲಿಕೆಯಲ್ಲಿ ಕೈಗೊಂಡ ನಿರ್ಣಯಕ್ಕೆ ತಮ್ಮ ಸಮ್ಮತಿ ಇಲ್ಲ. ಸ್ಮಾರ್ಟ ಸಿಟಿಯವರೇ ಈ ದಂಡ ತೆತ್ತಬೇಕೆಂಬುದು ನಮ್ಮ ನಿರ್ಣಯವಾಗಿದೆ. ಆಡಳಿತ ಪಕ್ಷದವರು ಪಾಲಿಕೆಯನ್ನು ಉಳಿಸುವ ವಿಚಾರದಲ್ಲಿಲ್ಲ. ಕೇವಲ ತಮ್ಮ ಸುರಕ್ಷತೆಯನ್ನು ನೋಡಿಕೊಳ್ಳುತ್ತಿದ್ದಾರೆ. ಎರಡು ಕಡೆಗಳಲ್ಲಿ ಅವರೇ ಪಾತ್ರಧಾರಿಗಳು ಎಂದ ಅವರು ತಾವೊಬ್ಬರೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಪಾಲಿಕೆಗೆ ನೀಡುವ ಅನುದಾನ ಮತ್ತು ಸ್ಮಾರ್ಟ ಸಿಟಿ ಅನುದಾನ ಸೇರಿದಂತೆ ಪಾಲಿಕೆಗೆ ಬರಬೇಕಾದ ಬಾಕಿ ಹಣವನ್ನು ದಂಡಕ್ಕಾಗಿ ಉಪಯೋಗಿಸಬೇಕಾಗುತ್ತದೆ ಎಂದರು.