ಬೆಳಗಾವಿ, ನ. 3: ಜುಲೈಯಲ್ಲಿ ಚಾಮರಾಜನಗರದ ಹನೂರು ತಾಲೂಕಿನ ಮೀಣ್ಯಂ ಸಮೀಪದ ಅರಣ್ಯದಲ್ಲಿ ಒಂದೇ ದಿನ 5 ಹುಲಿಗಳು ಮೃತಪಟ್ಟ ಘಟನೆ ಭಾರಿ ಸುದ್ದಿಯಾಗಿತ್ತು. ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಆ ಕಹಿ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸುಳೆಗಾಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 2 ಕಾಡಾನೆಗಳು ಸಾವನ್ನಪ್ಪಿವೆ. ಜಮೀನಿನ ಬಳಿ ತಂತಿ ಬೇಲಿಗೆ ವಿದ್ಯುತ್ ಕನೆಕ್ಷನ್ ನೀಡಿದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ . ಒಂದು ಗಂಡು ಮತ್ತು ಮತ್ತೊಂದು ಹೆಣ್ಣು ಆನೆ ಸಾವನ್ನಪ್ಪಿವೆ.
ಜಮೀನಿನ ಬೇಲಿಗೆ ಅಕ್ರಮವಾಗಿ ಮನೆಯಿಂದ ವಿದ್ಯುತ್ ಸಂಪರ್ಕ ನೀಡಿದ್ದ ಆರೋಪದಲ್ಲಿ ರೈತ ಗಣಪತಿ ಸಾತೇರಿ ಗುರವ್ ಅವರನ್ನು ಅರಣ್ಯ ಇಲಾಖೆ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೇ ಪ್ರಕರಣದಲ್ಲಿ ಗಣಪತಿಯ ಮಗ ಶಿವಾಜಿ ಗುರವ್ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಘಟನೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ತನಿಖೆಗೆ ಆದೇಶಿಸಿದ್ದಾರೆ. ಆನೆಗಳ ಮರಣೋತ್ತರ ಪರೀಕ್ಷೆ ನೆರವೇರಿಸಿ ಅರಣ್ಯ ಇಲಾಖೆಯ ವತಿಯಿಂದ ಅಂತ್ಯಕ್ರಿಯೆ ನಡೆಸಲಾಯಿತು.


