ನವದೆಹಲಿ, ಸೆಪ್ಟೆಂಬರ್ 2: ಕಾಂಗ್ರೆಸ್ ಆರಂಭಿಸಿರುವ ವೋಟ್ ಚೋರಿ (ಮತ ಕಳ್ಳತನ) ಆರೋಪಗಳಿಗೆ ಪ್ರತಿಯಾಗಿ ಬಿಜೆಪಿಯೂ ಅಸ್ತ್ರ ಬಿಟ್ಟಿದೆ. ಹಿರಿಯ ಕಾಂಗ್ರೆಸ್ ಮುಖಂಡ ಪವನ್ ಖೇರಾ (Pawan Khera) ಬಳಿ ಎರಡು ವೋಟರ್ ಐಡಿಗಳಿವೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ವಿವರ ನೀಡಿದ್ದು, ಪವನ್ ಖೇರಾ ಹಲವು ಬಾರಿ ವೋಟು ಚಲಾಯಿಸಿದ್ದಾರಾ ಎಂಬುದು ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ನ ಪವನ್ ಖೇರಾ ಬಳಿ 2 ವೋಟರ್ ಐಡಿ; ಬಿಜೆಪಿ ಪ್ರತ್ಯಾಸ್ತ್ರ

ಕಾಂಗ್ರೆಸ್ ವಕ್ತಾರರಾಗಿರುವ ಪವನ್ ಖೇರಾ ಅವರು ಜಂಗಪುರ ಮತ್ತು ನ್ಯೂ ಡೆಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕ ವೋಟರ್ ಐಡಿ ಹೊಂದಿದ್ದಾರೆ ಎಂದು ಹೇಳಿರುವ ಅಮಿತ್ ಮಾಳವೀಯ, ಆ ಎರಡು ವೋಟರ್ ಐಡಿಗಳ ಎಪಿಕ್ ನಂಬರ್, ಪಾರ್ಟ್ ನಂಬರ್ ಇತ್ಯಾದಿ ಮಾಹಿತಿಯನ್ನು ಹಾಕಿದ್ದಾರೆ.
ಎರಡು ಸಕ್ರಿಯ ಎಪಿಕ್ ನಂಬರ್ ಹೊಂದಿರುವ ಪವನ್ ಖೇರಾ ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಿದ್ದಾರಾ ಎಂಬುದನ್ನು ಚುನಾವಣಾ ಆಯೋಗ ತನಿಖೆ ನಡೆಸಬೇಕು ಎಂದು ಅಮಿತ್ ಮಾಳವೀಯ ಒತ್ತಾಯಿಸಿದ್ದಾರೆ.