ಕಲಬುರಗಿ, ಏಪ್ರಿಲ್ 27: ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಕರ್ನಾಟಕದ ಹಲವಡೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಕಳೆದ ಕೆಲವು ದಿನಗಳಲ್ಲಿ ಕೋಟ್ಯಂತರ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ಇದೀಗ ಅದರ ಮುಂದುವರಿದ ಭಾಗವಾಗಿ ಕಲಬುರಗಿಯ ರೈಲು ನಿಲ್ದಾಣದ ಬಳಿ ಶನಿವಾರ ಬೆಳಗ್ಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಎರಡು ಕೋಟಿ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ.
ವ್ಯಕ್ತಿಯೊಬ್ಬರು ರೈಲಿನಿಂದ ಇಳಿದು ಕಾರನ್ನು ಏರಿ ಹೊರಡುವ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೇ ವೇಳೆ ಎರಡು ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಸದ್ಯ ನಗದು ಮತ್ತು ಕಾರನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್ ಒಬ್ಬರಿಗೆ ಸೇರಿದ ಕಾರು ಇದು ಎಂದು ಹೇಳಲಾಗಿದೆ.
ಕಲಬುರಗಿಯು ಸೇರಿದಂತೆ ಉತ್ತರ ಕರ್ನಾಟಕ ವ್ಯಾಪ್ತಿಯ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದೆ. ಹಿನ್ನೆಲೆಯಲ್ಲಿ ಇಂದು ನಡೆದಿರುವ ಐಟಿ ದಾಳಿ, ಮಹತ್ವದ್ದಾಗಿದೆ.
ರಾಜ್ಯದ ದಕ್ಷಿಣದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೂ ಮುನ್ನ ಕೆಲವು ದಿನಗಳಲ್ಲಿ ಹಲವಡೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಕೋಟ್ಯಂತರ ರೂಪಾಯಿ ನಗದು ವಶಪಡಿಸಿಕೊಂಡಿದ್ದರು. ಚುನಾವಣಾ ಅಧಿಕಾರಿಗಳು ಸಹ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ನಗದನ್ನು ವಶಪಡಿಸಿಕೊಂಡಿದ್ದರು. ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಆಪ್ತರ ಮನೆಗಳ ಮೇಲೆ ಐಟಿ ದಾಳಿ ನಡೆದಿತ್ತು.
ಮತ್ತೊಂದೆಡೆ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಆಪ್ತರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವಿಚಾರವಾಗಿ ಸುಧಾಕರ್ ಮೇಲೆ ಇದೀಗ ಎಫ್ಐರ್ ದಾಖಲಿಸಲಾಗಿದೆ. ಸುಧಾಕರ್ ಆಪ್ತ, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಮಾದಾವರ ಗೋವಿಂದಪ್ಪ ಮನೆ ಮೇಲೆ ದಾಳಿ ಮಾಡಿದ್ದ ಐಟಿ ಅಧಿಕಾರಿಗಳು, 4.82 ಕೋಟಿ ರೂ. ನಗದು ಜಪ್ತಿ ಮಾಡಿದ್ದರು.