ಬಾಗಲಕೋಟೆ : ಎಪ್ರೀಲ್ ೦೬ (ಕರ್ನಾಟಕ ವಾರ್ತೆ) : ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಗೆ ಇದೇ ಎಪ್ರೀಲ್ ೯ ರಂದು ಮತದಾನ ನಡೆಯಲಿದ್ದು, ಮತದಾನಕ್ಕೆ ಬೇಕಾಗುವ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಗೆ ೧,೨೬,೯೯೯ ಪುರುಷ ಮತ್ತು ೧,೩೨,೭೭೫ ಮಹಿಳಾ ಮತದಾರರು ಹಾಗೂ ೨೩ ಇತರೆ ಸೇರಿ ಒಟ್ಟು ೨,೫೯,೭೯೭ ಮತದಾರರಿದ್ದು, ಎಪ್ರೀಲ್ ೯ ರಂದು ಮತ ಚಲಾಯಿಸಲಿದ್ದಾರೆ. ಅಲ್ಲದೇ ೩೮೫ ಸೇವಾ ಮತದಾರರು, ೧೭೦ ಅಂಚೆ ಮತಪತ್ರಗಳು ೯೦ ಪಿಡಬ್ಲೂಡಿ ಮತದಾರರಿದ್ದಾರೆ. ಉಪ ಚುನಾವಣೆಗೆ ಒಟ್ಟು ೩೨೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನವನಗರದ ಸೆಕ್ಟರ ನಂ.೪೩ ರಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿದೆ ಎಂದರು.
ಪ್ರತಿ ಮತಗಟ್ಟೆಗೆ ಒಬ್ಬ ಪ್ರಿಸೆಂಡಿಂಗ್ ಅಧಿಕಾರಿ, ಹಾಗೂ ೩ ಜನ ಪೊಲೀಂಗ್ ಅಧಿಕಾರಿಗಳನ್ನು ಗುರುತಿಸಲಾಗಿದ್ದು, ಹೆಚ್ಚುವರಿ ಸಿಬ್ಬಂದಿಗಳು ಸೇರಿ ಒಟ್ಟು ೧೫೬೪ ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಅಗತ್ಯತೆಗೆ ಅನುಗುಣವಾಗಿ ಮೈಕ್ರೋ ಆಬ್ಸರವರ್ ಹಾಗೂ ಪೊಲೀಸ್ ಇಲಾಖೆಯಿಂದ ಸಶಸ್ತ್ರ ಪಡೆಯನ್ನು ಸಹ ಮತಗಟ್ಟೆಗಳಿಗೆ ನೇಮಕ ಮಾಡಲಾಗಿದೆ. ಅಲ್ಲದೇ ೩೨೨ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಮತದಾರರ ಮತ ಚಲಾವಣೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಎರಡು ಪಿಂಕ್, ತಲಾ ಒಂದು ಯುವ, ಪಿಡಬ್ಲೂಡಿ, ಥೀಮ್ ಆಧಾರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
೧.೨೦ ಲಕ್ಷ ರೂ.ಗಳ ಮೌಲ್ಯ ಜಪ್ತಿ : ನೀತಿ ಸಂಹಿತೆ ಜಾರಿಯಾದಾಗಿನಿಂದ ೯೪.೦೩ ಲಕ್ಷ ರೂ.ಗಳ ನಗದು, ೩೯.೭೩ ಲಕ್ಷ ರೂ.ಗಳ ಮೌಲ್ಯದ ಅಬಕಾರಿ ಇಲಾಖೆಯಿಂದ ೧೪೬೩೭.೦೧ ಲೀಟರ ಸಾರಾಯಿ, ಪೊಲೀಸ್ ಇಲಾಖೆಯಿಂದ ೧೯೪.೩೬ ಲೀಟರ ಸಾರಾಯಿ, ೯ ವಾಹನ ಜಪ್ತಿ ಮಾಡಿ ೨೧ ಪ್ರಕರಣ ದಾಖಲಿಸಲಾಗಿದೆ. ೧.೨೦ ಲಕ್ಷ ರೂ.ಗಳ ಮೌಲ್ಯದ ಸೀರೆಗಳನ್ನು ಜಪ್ತ ಮಾಡಲಾಗಿದೆ ಎಂದರು.
ಅಂತಿಮ ೭೨ ಗಂಟೆ ನಿಶ್ಯಬ್ದ : ಮತದಾನದ ಪೂರ್ವ ೭೨ ಗಂಟೆಗಳಲ್ಲಿ ಮತದಾರರನ್ನು ಪ್ರಭಾವಿಸುವಂತಹ ಉಡುಗೊರೆ ವಸ್ತುಗಳು ಹಾಗೂ ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ಉಚಿತ ಆಹಾರ ವಿತರಿಸುವ ಬಗ್ಗೆ, ನಕಲಿ ಸಮಾರಂಭ ಆಯೋಜನೆ, ಪಿ-೩ ದಿನದಿಂದ ಮತದಾನ ದಿನದ ವರೆಗೆ ಕಾಯ್ದಿರಿಸಿದ ಕಲ್ಯಾಣ ಮಂಟಪ, ಸಮುದಾಯ ಭವನಗಳ ಪಟ್ಟಿ ಮೇಲೆ, ಸಮುದಾಯ ಅಡುಗೆಯನ್ನು ಏರ್ಪಡಿಸುವದ ಮೇಲೆ ತೀರ್ವ ನೀಗಾ ವಹಿಸಲಾಗುತ್ತಿದೆ ಎಂದರು.
ಅಂತಿಮ ೪೮ ಗಂಟೆಗಳ ನಿಶ್ಯಬ್ದ : ಎಪ್ರೀಲ್ ೭ ರಂದು ಸಂಜೆ ೬ ಗಂಟೆಯಿಂದ ಚುನಾವಣಾ ಬಹಿರಂಗ ಪ್ರಚಾರವನ್ನು ನಿಷೇಧಿಸಲಾಗಿದ್ದು, ಪ್ರಚಾರ ಅವಧಿ ಕೊನೆಗೊಂಡ ಬಳಿಕ ಹೊರಗಿನ ಮತಕ್ಷೇತ್ರದಿಂದ ಕರೆತಂದ ಮತ್ತು ಈ ಕ್ಷೇತ್ರದ ಮತದಾರರಲ್ಲದೇ ಇರುವ ರಾಜಕೀಯ ಅಧೀಕಾರಸ್ಥರು, ಪಕ್ಷದ ಕಾರ್ಯಕರ್ತರು, ಮೆರವಣಿಗೆ ಸಂಬಂಧ ಕಾರ್ಯಕರ್ತರು ಸೇರಿದಂತೆ ಮುಂತಾದವರು ಆ ಕ್ಷೇತ್ರದಿಂದ ಹೊರಹೋಗಬೇಕು. ಮತದಾನ ಕೊನೆಗೊಳ್ಳಲು ನಿಗದಿಸಪಡಿಸಿದ ಅವಧಿ ಮುಕ್ತಾಯಗೊಳ್ಳುವ ಅವಧಿಯಲ್ಲಿ ೫ ಜನ ಮಾತ್ರ ಮನೆ ಮನೆಗೆ ತೆರಳಿ ಪ್ರಚಾರ್ಯ ಕೈಗೊಳ್ಳಲು ಅವಕಾಶವಿರುತ್ತದೆ. ಎಪ್ರೀಲ್ ೭ ಸಂಜೆ ೬ ರಿಂದ ಎಪ್ರೀಲ್ ೯ ಮಧ್ಯರಾತ್ರಿ ೧೨ ಗಂಟೆವರೆಗೆ ಬಾಗಲಕೋಟೆ ಮತಕ್ಷೇತ್ರದ ಸುತ್ತಲೂ ೧೦ ಕಿ.ಮೀ ವ್ಯಾಪ್ತಿಯಲ್ಲಿ ಬರುವ ಮದ್ಯದ ಮಳಿಗೆಗಳಲ್ಲಿ ವ್ಯಾಪಾರ, ವಹಿವಾಟನ್ನು ಸಂಪೂರ್ಣವಾಗಿ ಬಂದ ಇಡಲಾಗಿದೆ ಎಂದರು.


