ತೆಲಂಗಾಣ : ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ರೆಮಲ್ ಚಂಡಮಾರುತದ ಪರಿಣಾಮ ತೆಲಂಗಾಣದ ಹಲವೆಡೆ ಭಾನುವಾರ ರಾತ್ರಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 13 ಜನರು ಮೃತಪಟ್ಟಿದ್ದಾರೆ.
ರಾಜ್ಯ ರಾಜಧಾನಿ ಹೈದರಾಬಾದ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸುರಿದ ಭಾರಿ ಬಿರುಗಾಳಿ ಸಹಿತ ಮಳೆ ಅಪಾರ ಹಾನಿಯನ್ನುಂಟು ಮಾಡಿವೆ. ರೆಮಲ್ ಚಂಡಮಾರುತ ಭಾನುವಾರ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿ ನಡುವೆ ಅಪ್ಪಳಿಸಿದ್ದು, ತೆಲಂಗಾಣದಲ್ಲಿ 13 ಜೀವಗಳನ್ನು ಬಲಿ ಪಡೆದಿದೆ.
ಹೈದರಾಬಾದ್ನ ವನಸ್ಥಲಿಪುರಂ ಗಣೇಶ ದೇವಸ್ಥಾನದ ಕೆನರಾ ಬ್ಯಾಂಕ್ ರಸ್ತೆಯಲ್ಲಿ ಕಾರು ಮತ್ತು ಆಟೋ ಮೇಲೆ ಮರ ಬಿದ್ದಿದೆ. ಹಯತ್ನಗರ, ಎಲ್ಬಿ ನಗರ, ಅಂಬರಪೇಟ್, ಕಾಚಿಗುಡ, ನಲ್ಲಕುಂಟಾ, ಉಪ್ಪಲ್, ನಾಗೋಲ್, ಮನ್ಸೂರಾಬಾದ್, ಮಲ್ಕಾಜಿಗಿರಿ, ತುರ್ಕಯಾಂಜಲ್ ಸೇರಿದಂತೆ ಹಲವೆಡೆ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ನಾಗರ್ಕರ್ನೂಲ್ ಜಿಲ್ಲೆಯೊಂದರಲ್ಲೇ ಪ್ರತ್ಯೇಕ ಘಟನೆಗಳಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ತಾಂಡೂರ್ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಕೋಳಿ ಶೆಡ್ ಕುಸಿದು ಒಂದೇ ಕುಟುಂಬದ ತಂದೆ, ಮಗಳು ಸೇರಿ ನಾಲ್ವರು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ರೈತ ಮಲ್ಲೇಶ್ (38), ಅವರ ಪುತ್ರಿ ಅನುಷಾ (12), ಕಟ್ಟಡ ಕಾರ್ಮಿಕರಾದ ಚೆನ್ನಮ್ಮ (38) ಮತ್ತು ರಾಮುಡು (36) ಕೋಳಿ ಶೆಡ್ ಕುಸಿದು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.