ಭುವನೇಶ್ವರ: ಗರಿಯಾಬಂದ್ ಜಿಲ್ಲೆಯ ಒಡಿಶಾ-ಛತ್ತೀಸ್‌ಗಢ ಗಡಿಯಲ್ಲಿ ಸಿಆರ್‌ಪಿಎಫ್‌ನೊಂದಿಗೆ ಒಡಿಶಾ ಮತ್ತು ಛತ್ತೀಸ್‌ಗಢ ಪೊಲೀಸ್ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ 12 ನಕ್ಸಲರು ಹತರಾಗಿದ್ದಾರೆ.
ಇದಕ್ಕೂ ಮುನ್ನ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಭಾಗವಾಗಿ ಸೋಮವಾರ ಮುಂಜಾನೆ ನಿಷೇಧಿತ ಸಿಪಿಐ (ಮಾವೋವಾದಿ)ನ ಇಬ್ಬರು ಮಹಿಳಾ ನಕ್ಸಲರನ್ನು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದರು.
ಈ ಮೂಲಕ ನಡೆಯುತ್ತಿರುವ ಅಂತರರಾಜ್ಯ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಹತರಾದ ಮಾವೋವಾದಿಗಳ ಸಂಖ್ಯೆ 14ಕ್ಕೆ ಏರಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಭದ್ರತಾ ಪಡೆ ಮತ್ತು ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ತಡರಾತ್ರಿ ಮತ್ತು ಮುಂಜಾನೆ 12 ನಕ್ಸಲರು ಹತರಾಗಿದ್ದಾರೆ’ ಎಂದು ಒಡಿಶಾ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡಿಜಿಪಿ ವೈಬಿ ಖುರಾನಿಯಾ ಪ್ರಕಾರ, ಸೆಲ್ಫ್ ಲೋಡಿಂಗ್ ರೈಫಲ್ ಮತ್ತು ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು) ಸೇರಿದಂತೆ ಅಫಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.