ಬೆಂಗಳೂರು: ಬೇಲೆಕೇರಿ ಬಂದರು ಮೂಲಕ ಅಕ್ರಮವಾಗಿ ಕಬ್ಬಿಣದ ಅದಿರನ್ನು ರಫ್ತು ಮಾಡಿ ಹಣ ಸಂಪಾದನೆ ಮಾಡಿದ ಆರೋಪ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಅದಿರು ರಫ್ತು ಮಾಡಿದ್ದ ಕಂಪೆನಿಗಳ ಮೇಲೆ ದಾಳಿ ನಡೆಸಿ ಬ್ಯಾಂಕ್ ಖಾತೆಯಲ್ಲಿದ್ದ 12.84 ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಅಕ್ರಮವಾಗಿ ಅದಿರು ರಫ್ತು ಸಾಗಾಟ ಆರೋಪ ಸಂಬಂಧ ಅ.16ರಂದು ಬೆಂಗಳೂರು, ಹೊಸಪೇಟೆ, ಗುರುಗ್ರಾಮ ಸೇರಿದಂತೆ 20 ಕಡೆಗಳಲ್ಲಿ ಇ.ಡಿ ದಾಳಿ ನಡೆಸಿತ್ತು. ಶೋಧ ಕಾರ್ಯ ವೇಳೆ ಅಕ್ರಮವಾಗಿ ಸಾಗಾಟ ಮಾಡಿರುವ ಬಗ್ಗೆ ವಿವಿಧ ಮಹತ್ವದ ದಾಖಲಾತಿಗಳನ್ನು ಪತ್ತೆ ಹಚ್ಚಿತ್ತು. ಲಾಭ ಪಡೆದ ಕಂಪೆನಿಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ 12.84 ಕೋಟಿ ರೂ. ಹಣವನ್ನು ಸೀಜ್ ಮಾಡಿದೆ. ಅಲ್ಲದೆ, 42 ಲಕ್ಷ ರೂ. ನಗದನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ 50 ಟನ್ ಮೆಟ್ರಿಕ್ ಟನ್ಗಿಂತ ಅಕ್ರಮವಾಗಿ ಅದಿರು ಸಾಗಾಟ ಮಾಡಿರುವ ಕಂಪೆನಿಗಳ ವಿರುದ್ಧ ಸಿಬಿಐ ತನಿಖೆ ನಡೆಸಿ ಈಗಾಗಲೇ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಕಳ್ಳ ಮಾರ್ಗದ ಮೂಲಕ ಅದಿರು ರಫ್ತು ಜೊತೆಗೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಯಾಗಿರುವುದು ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಇ.ಡಿ ತಿಳಿಸಿದೆ.