ಶ್ರೀನಗರ: ಜಮ್ಮು- ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಉಂಟಾದ ಮೇಘಸ್ಫೋಟದಲ್ಲಿ ಮೂವರು ಮೃತಪಟ್ಟು ಇಬ್ಬರು ಕಾಣೆಯಾಗಿದ್ದಾರೆ. ಪ್ರತ್ಯೇಕ ಘಟನೆಯಲ್ಲಿ, ನೆರೆಯ ರಿಯಾಸಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಭೂಕುಸಿತ ಸಂಭವಿಸಿ ಒಂದೇ ಕುಟುಂಬದ ಏಳು ಜನರು ಮೃತಪಟ್ಟಿದ್ದಾರೆ.
ರಂಬನ್ ಜಿಲ್ಲೆಯ ರಾಜ್‌ಗಢ ತಹಸಿಲ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದ ಮೇಘಸ್ಫೋಟದಿಂದ ಭೂಕುಸಿತ ಮತ್ತು ಹಠಾತ್ ಪ್ರವಾಹ ಉಂಟಾಗಿದೆ . ಇದರಿಂದಾಗಿ ಹಲವಾರು ಮನೆಗಳು ಸಹ ಹಾನಿಗೊಳಗಾಗಿವೆ.
ಅಧಿಕಾರಿಗಳು ಈ ಪ್ರದೇಶದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಇಬ್ಬರನ್ನು ರಕ್ಷಿಸಲು ಎಸ್ ಡಿಆರ್ ಎಫ್, ಪೊಲೀಸ್, ಸ್ಥಳೀಯ ನಾಗರಿಕ ಸರ್ಕಾರಿ ಸಂಸ್ಥೆಗಳು ಮತ್ತು ನಿವಾಸಿಗಳ ತಂಡಗಳು ಒಟ್ಟಾಗಿ ಕೆಲಸ ಮಾಡುತ್ತಿವೆ.