ಝಾನ್ಸಿ(ಉತ್ತರ ಪ್ರದೇಶ): ಕಾನ್ಪುರದಲ್ಲಿ 1000 ಕೋಟಿ ಮೌಲ್ಯದ ಭೂಮಿ ಒತ್ತುವರಿ ಮಾಡಿಕೊಂಡ ಪ್ರಕರಣದ ಮಾಸ್ಟರ್ ಮೈಂಡ್ನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಹರೇಂದ್ರ ಮಸಿಹ್ ಬಂಧಿತ ಆರೋಪಿ.
“ಈತ ಕಾನ್ಪುರದಲ್ಲಿ ಕೋಟ್ಯಂತರ ಮೌಲ್ಯದ ಭೂಮಿಯನ್ನು ಆಕ್ರಮಿಸಿಕೊಂಡ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, 3 ತಿಂಗಳಿನಿಂದ ನಾಪತ್ತೆಯಾಗಿದ್ದ. ಆರೋಪಿಯನ್ನು ಪತ್ತೆ ಮಾಡಿ ಕೊಟ್ಟವರಿಗೆ 1 ಲಕ್ಷ ರೂ. ಹಣ ಬಹುಮಾನವನ್ನು ಪೊಲೀಸರು ಘೋಷಿಸಿದ್ದರು. ನಾಪತ್ತೆಯಾಗಿದ್ದ ಆರೋಪಿ ಮಸಿಹ್ ತನ್ನ ಸುಳಿವು ಸಿಗದಿರಲು ಮೊಬೈಲ್ ಕೂಡ ಬಳಸುತ್ತಿದ್ದಿರಲಿಲ್ಲ”.
“ಇದರಿಂದ ಆತನಿರುವ ಜಾಗವನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಅಸಾಧ್ಯವಾಗಿ ಪರಿಣಮಿಸಿತ್ತು. ಕೊನೆಗೆ ಭಾನುವಾರ ರಾತ್ರಿ 11.40ರ ಸುಮಾರಿಗೆ ಪೊಲೀಸರಿಗೆ ಹರೇಂದ್ರ ಮಸಿಹ್ ಬಗ್ಗೆ ಮಾಹಿತಿ ದೊರಕಿದೆ. ಮಾಹಿತಿ ಬೆನ್ನಲ್ಲೆ ಬಲೆ ಬೀಸಿದ ಝಾನ್ಸಿ ಪೊಲೀಸರು, ರೈಲ್ವೆ ನಿಲ್ದಾಣದ ಗಾಂಧಿ ಚೌಕ್ ಬಳಿ ಆರೋಪಿಯನ್ನು ಬಂಧಿಸಿದ್ದಾರೆ. ಈತನ ಬಳಿ ನಕಲಿ ನಂಬರ್ ಪ್ಲೇಟ್ ಇರುವ ಬೈಕ್, ನಕಲಿ ಗುರುತಿನ ಚೀಟಿಯೂ ಪತ್ತೆಯಾಗಿದೆ ಎಂದು ನವಾಬಾದ್ ಪೊಲೀಸ್ ಠಾಣೆ ಪ್ರಭಾರಿ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.