ಕಾಬೂಲ್ (ಅಫ್ಘಾನಿಸ್ತಾನ): ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸಂಘರ್ಷ ಮುಂದುವರಿದಿದೆ. ಶುಕ್ರವಾರ ತಡರಾತ್ರಿ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರು ಸೇರಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ.
ಉಭಯ ದೇಶಗಳ ನಡುವಿನ ಎರಡು ದಿನಗಳ ಕದನ ವಿರಾಮ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿ ವಾಯು ದಾಳಿ ನಡೆಸಿದೆ ಎಂದು ಅಫ್ಘಾನ್ ಅಧಿಕಾರಿಗಳು ಆರೋಪಿಸಿದ್ದಾರೆ.
ಎರಡು ದೇಶಗಳ ನಡುವಿನ 48 ಗಂಟೆಗಳ ಕದನ ವಿರಾಮ ಸುಮಾರು ಒಂದು ವಾರದ ರಕ್ತಸಿಕ್ತ ಗಡಿ ಘರ್ಷಣೆಗೆ ಕೊಂಚ ವಿರಾಮ ನೀಡಿತ್ತು. ಆದರೆ ಬಳಿಕ ಪಾಕ್ ಮತ್ತೆ ವೈಮಾನಿಕ ದಾಳಿ ಮಾಡಿದೆ.
“ಪಾಕಿಸ್ತಾನವು ಕದನ ವಿರಾಮವ ಉಲ್ಲಂಘಿಸಿ ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದ ಮೂರು ಸ್ಥಳಗಳ ಮೇಲೆ ಬಾಂಬ್ ದಾಳಿ ಮಾಡಿದೆ. ಅಫ್ಘಾನಿಸ್ತಾನ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತದೆ.” ಎಂದು ಹಿರಿಯ ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.