ಬೆಂಗಳೂರು, ಜುಲೈ 31: ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಇಷ್ಟಪಟ್ಟರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಅದೇ ತರಗತಿಗಳಿಗೆ ದಾಖಲಾಗಿ ವ್ಯಾಸಂಗ ಮಾಡಬಹುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ರಾಜ್ಯ ಪಠ್ಯಕ್ರಮದ ತರಗತಿ ವಿದ್ಯಾರ್ಥಿಗಳು ಇಷ್ಟಪಟ್ಟರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಯಾವುದೇ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜಿನಲ್ಲಿ ಅದೇ ತರಗತಿಗಳಿಗೆ ಮತ್ತೆ ದಾಖಲಾಗಿ ವ್ಯಾಸಂಗ ಮಾಡಬಹುದು ಎಂದರು.
ಪ್ರತಿ ವರ್ಷ ಕನಿಷ್ಠ ಒಂದು ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಮೊಟಕುಗೊಳಿಸುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಅಂತ ಈ ವಿಶೇಷ ಸೌಲಭ್ಯ ನೀಡಲಾಗಿದೆ. ರೆಗ್ಯುಲರ್ ವಿದ್ಯಾರ್ಥಿಗೆ ಸಿಗುವ ಎಲ್ಲ ಅನೂಕೂಲ ಈ ವಿದ್ಯಾರ್ಥಿಗಳಿಗೆ ಸಿಗುತ್ತೆ ಎಂದು ಹೇಳಿದರು.
ನನ್ನ ಇಲಾಖೆ ಅಡಿಯಲ್ಲಿ 46 ಸಾವಿರ ಶಾಲೆಗಳು ಹಾಗೂ ಕಾಲೇಜು ಬರುತ್ತವೆ. ಇದರಲ್ಲಿ 15 ಸಾವಿರ ಅನುದಾನಿತ ಶಾಲೆಗಳಿವೆ. 42 ಸಾವಿರ ಅತಿಥಿ ಶಿಕ್ಷಕರು ನೇಮಕ ಮಾಡಿದ್ದೇವೆ. 13,500 ಸಾವಿರ ಖಾಯಂ ಶಿಕ್ಷಕರ ನೇಮಕ ಮಾಡಿದ್ದೇವೆ. 11,400 ಸಾವಿರ ಜನರಿಗೆ ಖಾಯಂ ನೇಮಾತಿಯಾಗಿದೆ. 53 ಸಾವಿರ ಖಾಯಂ ಶಿಕ್ಷಕರ ನೇಮಕಾತಿಯಾಗಬೇಕಿದೆ. ಕಳೆದ 9 ವರ್ಷಗಳಲ್ಲಿ ಅನುದಾನಿತ ಶಾಲೆಗೆ ಒಬ್ಬ ಶಿಕ್ಷರನ್ನು ನೇಮಕ ಮಾಡಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಅನುದಾನಿತ ಶಾಲೆಗಳಿಗೆ 5 ಸಾವಿರ ಶಿಕ್ಷಕರ ನೇಮಕಾತಿ ಆಗಲಿದೆ ಎಂದು ತಿಳಿಸಿದರು.