ಸಿದ್ದೇಶ್ವರ ಸ್ವಾಮಿಗಳ ಪುಣ್ಯ ಸ್ಮರಣೆ: ಆದರ್ಶ ಅಳವಡಿಕೆಗೆ ಕರೆ
ದೇಗುಲಹಳ್ಳಿಯ ತವನಪ್ಪ ಅವಲಕ್ಕಿ ಪ್ರೌಢ ಶಾಲೆಯಲ್ಲಿ ನುಡಿ ನಮನ ಕಾರ್ಯಕ್ರಮ
ಚನ್ನಮ್ಮನ ಕಿತ್ತೂರು: ನಾಡಿನ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪುಣ್ಯ ಸ್ಮರಣೆಯ ನಿಮಿತ್ತ ಸಮೀಪದ ದೇಗುಲಹಳ್ಳಿ ಗ್ರಾಮದಲ್ಲಿರುವ ತವನಪ್ಪ ಅವಲಕ್ಕಿ ಪ್ರೌಢ ಶಾಲೆಯಲ್ಲಿ ಭಾವಪೂರ್ಣ ನುಡಿ ನಮನ ಮತ್ತು ಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ವೀರೇಶ್ವರ ಸ್ವಾಮಿಗಳು ಸಿದ್ದೇಶ್ವರ ಸ್ವಾಮಿಗಳ ಸರಳತೆ, ಜೀವನಶೈಲಿ ಮತ್ತು ಸಮಾಜಕ್ಕೆ ನೀಡಿದ ಜ್ಞಾನ ದಾಸೋಹದ ಮಹತ್ವವನ್ನು ವಿವರಿಸಿದರು. “ಸಿದ್ದೇಶ್ವರ ಶ್ರೀಗಳು ಕೇವಲ ಆಧ್ಯಾತ್ಮಿಕ ಗುರುಗಳಾಗಿರಲಿಲ್ಲ, ಬದಲಿಗೆ ಅವರು ಎಲ್ಲ ವರ್ಗದ ಜನರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದರು. ಅವರ ಪ್ರವಚನಗಳು ಮತ್ತು ಕೃತಿಗಳು ಬದುಕಿನ ಸಾರವನ್ನು ತಿಳಿಸುತ್ತಿದ್ದವು. ವಿದ್ಯಾರ್ಥಿಗಳು ಅವರ ಸರಳ ಜೀವನ ಹಾಗು ಜ್ಞಾನ ದಾಸೋಹದ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಾದ್ಯಾಪಕರಾದ ಶ್ರೀಶೈಲ ಅಂಗಡಿ ಅವರು, ಸಿದ್ದೇಶ್ವರ ಶ್ರೀಗಳ ಕುರಿತು ರಚಿಸಿದ ಸುಂದರ ಕವನವನ್ನು ವಾಚಿಸುವ ಮೂಲಕ ಶ್ರೀಗಳಿಗೆ ಕಾವ್ಯ ನಮನ ಸಲ್ಲಿಸಿದರು. ಅವರ ಕವನವು ಸಭೆಯಲ್ಲಿದ್ದ ಎಲ್ಲರ ಮನಸ್ಸನ್ನು ಮುಟ್ಟಿ ಭಕ್ತಿಯ ಭಾವವನ್ನು ಹೆಚ್ಚಿಸಿತು.
ವಿಜ್ಞಾನ ಶಿಕ್ಷಕರಾದ ಎಸ್. ಎಮ್. ಹಳಂಗಳಿ ಅವರು ಸಿದ್ದೇಶ್ವರ ಶ್ರೀಗಳೊಂದಿಗೆ ತಮಗಿದ್ದ ಒಡನಾಟವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಶ್ರೀಗಳ ಹಾಸ್ಯಪ್ರಜ್ಞೆ, ಸಕಾಲಿಕ ಮಾತುಗಳು ಮತ್ತು ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಅವರ ಗುಣಗಳನ್ನು ಸ್ಮರಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಗಳನ್ನು ಬೋಧಿಸಿದರು.
ಕಾರ್ಯಕ್ರಮವನ್ನು ಶಾಲಾ ಶಿಕ್ಷಕರಾದ ಕೆ. ಎಸ್. ತಳವಾರ ನಿರೂಪಿಸಿದರು. ಮತ್ತೊಬ್ಬ ಶಿಕ್ಷಕರಾದ ಎಸ್. ಬಿ. ಹಾರುಗೊಪ್ಪ ವಂದಿಸಿದರು.
ಈ ವೇಳೆ ಶಿಕ್ಷಕರಾದ ಎಸ್. ಬಿ. ಗಂಗಾವತಿ, ಕುಮಾರ ಅರಳಿಮರದ, ಎಲ್. ಆರ್. ನಾಯಕ, ಆರ್. ಎಫ್. ಜೈನರ್, ಕೆ. ಬಿ. ಕುಂಬಾರ, ಆರ್. ಬಿ. ಪಾಟೀಲ ಸೇರಿದಂತೆ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡು ಸಿದ್ದೇಶ್ವರ ಸ್ವಾಮಿಗಳಿಗೆ ಶ್ರದ್ಧಾ ನಮನ ಸಲ್ಲಿಸಿದರು.


