ಬೆಳಗಾವಿ : ನಿರಂತರವಾಗಿ ಗಡಿ ಭಾಗದ ಬೆಳಗಾವಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುತ್ತ, ನಾಡದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವ ಎಂಇಎಸ್ ನಾಯಕ ಶುಭಂ ಶಳಕೆ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹಾಗೂ ಕಾರ್ಯಕರ್ತರು ಪೊಲೀಸ್ ಕಮಿಷನರ್ ಗೆ ಕರವೇ ಮನವಿ ಮಾಡಿಕೊಂಡರು.
ಶುಕ್ರವಾರ ಪೊಲೀಸ್ ಕಮಿಷನರ್ ಕಛೇರಿಗೆ ತೆರಳಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ರಾಜಕೀಯ ಒತ್ತಡಕ್ಕೆ ಮಣಿದು ಶುಭಂ ಶಳಕೆಯನ್ನು ರಕ್ಷಿಸಲು ಪೋಲಿಸ್ ಇಲಾಖೆ ಮುಂದಾದರೆ ಗೃಹಮಂತ್ರಿಗಳು ಹಾಗೂ ಪೊಲೀಸ್ ಮಹಾನಿರ್ದೇಶಕರ ಗಮನಕ್ಕೆ ತರುವ ಮೂಲಕ ಪೊಲೀಸರ ವಿಳಂಬ ನೀತಿಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ನಾಡದ್ರೋಹಿ ಎಂಇಎಸ್ ನಾಯಕ ಶುಭಂ ಶಳಕೆ ವಿರುದ್ಧ ಬೆಳಗಾವಿ ಮಹಾನಗರದ ಪೊಲೀಸ್ ಠಾಣೆಗಳಲ್ಲಿ ಎಷ್ಟು ಕೇಸುಗಳು ದಾಖಲಾಗಿವೆ? ಈವರೆಗೆ ಆತನ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲು ಮಾಡಲು ವಿಳಂಬ ಆಗಿದ್ದೇಕೆ? ಎಷ್ಟು ಜನ ಕನ್ನಡಪರ ಹೋರಾಟಗಾರರ ಮೇಲೆ ತಾವು ರೌಡಿಶೀಟ್ ಓಪನ್ ಮಾಡಿದ್ದೀರಾ? ಈ ಎಲ್ಲ ಪ್ರಶ್ನೆಗಳಿಗೆ ಸಮಸ್ತ ಕನ್ನಡಿಗರಿಗೆ ತಾವು ಕೂಡಲೇ ಉತ್ತರ ಕೊಡಬೇಕು. ಅನೇಕ ಕನ್ನಡಪರ ಹೋರಾಟಗಾರರ ವಿರುದ್ದ ರೌಡಿಶೀಟ್ ಓಪನ್ ಮಾಡಿ ನಾಡದ್ರೋಹಿ ಶುಭಂ ಶಳಕೆ ವಿರುದ್ಧ ಇನ್ನುವರೆಗೆ ಯಾವ ಕಾರಣಕ್ಕಾಗಿ ರೌಡಿಶೀಟ್ ಓಪನ್ ಮಾಡಿ ಗೂಂಡಾ ಕಾಯ್ದೆಯಲ್ಲಿ ಏಕೆ ಬಂಧಿಸಿಲ್ಲ? ಎಂದು ಪ್ರಶ್ನಿಸಿದರು.


