ನಮ್ಮ ಪದ್ಧತಿ ಪ್ರಕಾರ ಅಂತ್ಯಕ್ರಿಯೆ ಮಾಡಿದ್ದೇವೆ: ರಾಜಶೇಖರ್ ಸೋದರಿ ಉಮಾ ಸ್ಪಷ್ಟನೆ
ಬಳ್ಳಾರಿ, ಜ.07: ನಮ್ಮ ಕುಟುಂಬದಲ್ಲಿ ಅವಿವಾಹಿತರು ಮೃತರಾದರೆ ಮೃತದೇಹ ಸುಡುತ್ತಾರೆ, ವಿವಾಹಿತರು ಮೃತರಾದರೆ ಹೂಳುತ್ತಾರೆ, ನಮ್ಮ ಪದ್ಧತಿ ಪ್ರಕಾರ ನಮ್ಮ ಸೋದರನ ಅಂತ್ಯ ಸಂಸ್ಕಾರ ಮಾಡಿದ್ದೇವೆ ಎಂದು ಜ.01ರ ರಾತ್ರಿ ಶೂಟೌಟಿನಲ್ಲಿ ಮೃತನಾದ ರಾಜಶೇಖರ್ ಸೋದರಿ ಉಮಾ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಆರೋಪವನ್ನು ತಳ್ಳಿ ಹಾಕಿದರು.
ಅಂತ್ಯಕ್ರಿಯೆ ಬಗ್ಗೆ ಅನುಮಾನಗಳಿವೆ ಎಂದು ಕೇಳಿದ ಮಾಧ್ಯಮದವರಿಗೆ ಉತ್ತರಿಸಿದ ಅವರು, ನಮ್ಮ ಕುಟುಂಬದ ಹಿರಿಯರು ಹೇಳಿದ ಪ್ರಕಾರ ಅಂತ್ಯಕ್ರಿಯೆ ನಡೆಸಿದ್ದೇವೆ, ನಮ್ಮ ಸೋದರನೇ ಹೊರಟು ಹೋಗಿದ್ದಾನೆ, ಅಂತ್ಯಕ್ರಿಯೆ ಬಗ್ಗೆ ಏನು ಮಾತನಾಡುವುದು ಎಂದು ಬೇಸರದಿಂದ ಉತ್ತರಿಸಿದ್ದಾರೆ.
ಹೂಳುವ ಉದ್ಧೇಶದಿಂದ ಕುಣಿ ತೆಗೆಸಿದ್ದು ನಿಜ, ಆದರೆ ಹಿರಿಯರು ಹೇಳಿದಂತೆ ನಮ್ಮ ಸೋದರನ ಮೃತದೇಹ ಸುಟ್ಟಿದ್ದೇವೆ ಎಂದು ಉಮಾ ಹೇಳಿದ್ದಾರೆ.
ನಮ್ಮ ಸೋದರ ರಾಜಶೇಖರ ಸತ್ತು ಹೋಗಿದ್ದಾನೆ, ರಾಜಕೀಯಕ್ಕೆ ಬಲಿಯಾಗಿದ್ದಾನೆ, ನಮ್ಮ ನೋವಿನಲ್ಲಿ ನಾವಿರುತ್ತೇವೆ, ಇಂತಹ ಸಂದರ್ಭದಲ್ಲಿ ಶವದ ಮೇಲೆ ರಾಜಕೀಯ ಮಾಡಬಾರದೆಂದು ಮಾಜಿ ಸಚಿವ ಶ್ರೀರಾಮುಲು ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ದಿನ ನಿತ್ಯ ಮಾಧ್ಯಮಗಳಲ್ಲಿ ನಮ್ಮ ಸೋದರನ ಸಾವಿನ ಬಗ್ಗೆ ಸುದ್ದಿ ನೋಡಿ ನಾವು ನೊಂದುಕೊಳ್ಳಬೇಕೆ? ಸುದ್ದಿ ನೋಡಿದಾಗ ನಮಗೆ ಕಿರಿಕೌರಯಾಗುತ್ತದೆ, ಇದನ್ನು ಇಲ್ಲಿಗೇ ನಿಲ್ಲಿಸಿ, ದೇವರೆಂಬುವವನು ಇದ್ದರೆ ನಮಗೆ ನ್ಯಾಯ ಕೊಡುತ್ತಾನೆ ಎಂದು ಹೇಳಿದ್ದಾರೆ.


