ಬೆಂಗಳೂರು: ರಾಜ್ಯದಲ್ಲಿ ಸುಗಮ ಅಧಿಕಾರ ವರ್ಗಾವಣೆಗಾಗಿ ಕಾಂಗ್ರೆಸ್ ಹೈಕಮಾಂಡ್ ತನ್ನ ಕಸರತ್ತು ಆರಂಭಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಲ್ಲಾ ಸಲಹೆಗಳನ್ನು ಸ್ವೀಕರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರು ತಮ್ಮ ಎರಡೂವರೆ ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಅವರ ನಿಷ್ಠಾವಂತ, ಆಪ್ತ ಬೆಂಬಲಿಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ, ಪಕ್ಷದ ಹೈಕಮಾಂಡ್ ಯಾವುದೇ ಕಾಂಗ್ರೆಸ್ ನಾಯಕನಿಗೆ ಅಧಿಕಾರ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಹೈಕಮಾಂಡ್ ಮಟ್ಟದಲ್ಲಿ, ಅಧಿಕಾರ ಹಂಚಿಕೆಯ ಕುರಿತು ಒಪ್ಪಂದವಾಗಿತ್ತು, ಅದಕ್ಕೆ ಸಿದ್ದರಾಮಯ್ಯ ಕೂಡ ಸಮ್ಮತಿಸಿದ್ದರು ಎಂದು ಮೂಲಗಳು ತಿಳಿಸಿವೆ. ಸೋಮವಾರ ನಡೆದ ಕೆಪಿಸಿಸಿ ಸಾಮಾನ್ಯ ಸಭೆಯಲ್ಲಿ, ಸಿದ್ದರಾಮಯ್ಯ ಗಾಂಧಿ ಕುಟುಂಬದ ತ್ಯಾಗದ ಬಗ್ಗೆ ಮಾತನಾಡಿದರು. ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತ್ಯಾಗ ಮಾಡಿದ್ದಾರೆ , ಹೀಗಾಗಿ ನಾವು ಕೂಡ ಅವರ ಹಾದಿಯಲ್ಲಿ ಸಾಗಬೇಕು ಎಂದು ಅವರು ಹೇಳಿದರು.
ನಂತರ ಸಿಎಲ್ಪಿ ಸಭೆಯಲ್ಲಿ ನಾನು ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಇಬ್ಬರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದು ಪ್ರತಿಪಾದಿಸಿದ್ದರು. ಡಿಸೆಂಬರ್ 7, 2024 ರಂದು ಚಾಮರಾಜನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿದ್ದೇನೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.