ವಾಷಿಂಗ್ಟನ್, ಸೆಪ್ಟೆಂಬರ್ 04: ಒಂದೊಮ್ಮೆ ಭಾರತವು ರಷ್ಯಾದಿಂದ ತೈಲ ಆಮದು ಮುಂದುವರೆಸಿದರೆ ಮತ್ತಷ್ಟು ಸುಂಕ ಕಟ್ಟಬೇಕಾಗುತ್ತೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಚೀನಾದ ನಂತರ ರಷ್ಯಾದ ತೈಲದ ಅತಿದೊಡ್ಡ ಖರೀದಿದಾರ ಎಂದು ಕರೆದಿದ್ದಾರೆ.
ರಷ್ಯಾದೊಂದಿಗೆ ವ್ಯಾಪಾರ ಸಂಬಂಧವನ್ನು ಮುಂದುವರಿಸುವ ದೇಶಗಳ ವಿರುದ್ಧ ಅಮೆರಿಕ ಇನ್ನೂ ಹಂತ-2 ಮತ್ತು ಹಂತ-3 ಸುಂಕಗಳನ್ನು ವಿಧಿಸಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಚೀನಾದ ಮೇಲಿನ ಹೆಚ್ಚುವರಿ ಸುಂಕಗಳನ್ನು ಅಮೆರಿಕ ನವೆಂಬರ್ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರೂ, ಭಾರತವು ಭಾರೀ ಸುಂಕಗಳಿಂದ ಹಾನಿಗೊಳಗಾಗಿದೆ.
ಈ ತಿಂಗಳ ಆರಂಭದಲ್ಲಿ ಶೇ. 25 ರಷ್ಟು ಸುಂಕವನ್ನು ವಿಧಿಸಲಾಯಿತು ಮತ್ತು ಆಗಸ್ಟ್ 27 ರಂದು ಹೆಚ್ಚುವರಿಯಾಗಿ ಶೇ.25 ರಷ್ಟು ದ್ವಿತೀಯ ನಿರ್ಬಂಧ ಜಾರಿಗೆ ಬಂದಿದ್ದು, ಭಾರತೀಯ ಸರಕುಗಳ ಮೇಲಿನ ಒಟ್ಟು ಸುಂಕವು ಶೇ. 50 ಕ್ಕೆ ತಲುಪಿದೆ