ಮೈಸೂರು: “ಮುಡಾ ಕಚೇರಿಯಲ್ಲಿ ನಡೆದಿರುವ ಹಗರಣವನ್ನು ಸಿಬಿಐಗೆ ವಹಿಸಬೇಕು” ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಭಾನುವಾರ ಬಿಜೆಪಿ ಕಚೇರಿಗೆ ಆಗಮಿಸಿದ ವೇಳೆ, ಮುಡಾ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಸಿಎಂ ಸಿದ್ದರಾಮಯ್ಯನವರ ಮೂಗಿನಡಿ ಎರಡೂವರೆ ಸಾವಿರ ಕೋಟಿಯಷ್ಟು ಸರ್ಕಾರಿ ಆಸ್ತಿ ದುರುಪಯೋಗವಾಗಿದೆ ಎಂಬ ವಿಚಾರ ಕೇಳಿ ದಿಗ್ಬ್ರಮೆಯಾಯಿತು” ಎಂದರು.
“ಬಡವರಿಗೆ, ದಲಿತರಿಗೆ ಕೊಡಲು ಇವರ ಬಳಿ ನಿವೇಶನಗಳಿಲ್ಲ. ಕಳ್ಳ-ಕಾಕರಿಗೆ ಬೇನಾಮಿಯಾಗಿ ಕೊಡಲು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರ ತಲೆದಂಡವಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸುತ್ತೇವೆ” ಎಂದು ಎಚ್ಚರಿಸಿದರು.
ಚಂದ್ರಶೇಖರನಾಥ ಸ್ವಾಮೀಜಿ ಬಗ್ಗೆ ಸಚಿವ ರಾಜಣ್ಣ ಹಗುರ ಹೇಳಿಕೆ ಕುರಿತು ಮಾತನಾಡಿ, “ನಾನು ಆ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ಬಯಸಲ್ಲ. ಇದು ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸೂಚಿಸುತ್ತದೆ” ಎಂದರು.