ಮಾಧ್ಯಮಗಳು ಸಮಾಜ ಸುಧಾರಿಸುವ ಕಾರ್ಯಕ್ಕೆ ಮುಂದಾಗಬೇಕು: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ

Hasiru Kranti
ಮಾಧ್ಯಮಗಳು ಸಮಾಜ ಸುಧಾರಿಸುವ ಕಾರ್ಯಕ್ಕೆ ಮುಂದಾಗಬೇಕು: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ
WhatsApp Group Join Now
Telegram Group Join Now

ಬಳ್ಳಾರಿ,ಜ.09 -ಮಾಧ್ಯಮಗಳು ಸಮಾಜ ಸುಧಾರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಹೇಳಿದರು.
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಾರ್ತಾ ಶಾಖೆ ಗೂಹಾ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್‌ನ ಹಳೆಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಶುಕ್ರವಾರ ಆಯೋಜಿಸಿದ್ದ ವಾರ್ತಾಲಾಪ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಕಾಲಮಾನದ ಯುವಜನರಲ್ಲಿ ಮೊಬೈಲ್, ಸಾಮಾಜಿಕ ಜಾಲತಾಣಗಳ ಗೀಳು ಹೆಚ್ಚಾಗುತ್ತಿದ್ದು, ಇದರಿಂದ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದನ್ನು ಸುಧಾರಿಸುವ ಜವಾಬ್ದಾರಿ ಮಾಧ್ಯಮದವರ ಮೇಲಿದೆ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮಾತ್ರ ಇದ್ದರೆ ಸಾಲದು, ನಾಲ್ಕನೇ ಅಂಗವಾದ ಮಾಧ್ಯಮವೂ ಅವಶ್ಯ ಎಂದು ಹೇಳಿದರು.
ಕೇವಲ ನಕಾರಾತ್ಮಕ ಸುದ್ದಿಗಳಿಗೆ ಒತ್ತು ನೀಡದೆ, ಸಕಾರಾತ್ಮಕ, ಸಮಾಜಕ್ಕೆ ಪೂರಕವಾದ ಸುದ್ದಿಗಳಿಗೆ ಆದ್ಯತೆ ನೀಡಬೇಕು. ವೃತ್ತಿಯಲ್ಲಿ ವಸ್ತುನಿಷ್ಠತೆ, ಪ್ರಾಮಾಣಿಕತೆ, ಸಾಮಾಜಿಕ ಜವಾಬ್ದಾರಿಯನ್ನು ಹೊಂದಬೇಕು. ಸಮಾಜದಲ್ಲಿ ಮಾನವೀಯ ಗುಣ ಬೆಳೆಸಬೇಕಾದ ಗುರುತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಮುಂದಿನ ಪೀಳಿಗೆಗೆ ಉತ್ತಮ ಮಾಹಿತಿ ಬಿತ್ತರಿಸುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು ಎಂದರು.
ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಗಾದೆಪ್ಪ ಅವರು ಮಾತನಾಡಿ, ಸಮಾಜಕ್ಕೆ ಮಾಧ್ಯಮದವರ ಕೊಡುಗೆ ಅಪಾರ. ಉತ್ತಮ ಸುದ್ದಿಗಳಿಂದ ಅನೇಕ ಸಾಮಾಜಿಕ ಪರಿವರ್ತನೆಗಳು ಆಗಿವೆ. ಸುದ್ದಿಗಳ ಸತ್ಯಾಸತ್ಯತೆ ಮನವರಿಕೆ ಮಾಡುವಲ್ಲಿ ಮಾಧ್ಯಮದವರ ಕಾರ್ಯವೈಖರಿ ಅತ್ಯಂತ ಪ್ರಮುಖ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ವೀರಭದ್ರಗೌಡ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳು, ಅದರ ಅನುಷ್ಠಾನದ ವಾಸ್ತವತೆ, ಅಂಕಿ ಅಂಶಗಳ ವರದಿ ತಿಳಿದುಕೊಳ್ಳಲು ವಾರ್ತಾಲಾಪ ಕಾರ್ಯಾಗಾರ ಅನುವು ಮಾಡಿಕೊಡುತ್ತದೆ. ಅಂತರ್ಜಾಲದ ಮಾಹಿತಿಗಳ ಹೊರತಾಗಿ, ಆಯಾ ಇಲಾಖೆಗಳ ಅಧಿಕಾರಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ, ಯೋಜನೆಗಳ ಬಗ್ಗೆ ವಿಸ್ತೃತ ಮಾಹಿತಿ ತಿಳಿದುಕೊಳ್ಳಬಹುದು ಎಂದು ಹೇಳಿದರು.
ಬಳ್ಳಾರಿ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಹೆಚ್.ಅಂಬರೀಶ್ ಅವರು ಮೊದಲ ತಾಂತ್ರಿಕ ಅಧಿವೇಶನದಲ್ಲಿ ಮಾತನಾಡಿ, ‘ವಿಕಸಿತ ಭಾರತ: ಜಿ ರಾಮ್ ಜಿ’ ಯೋಜನೆಯಡಿ ಹಿಂದೆ ಇದ್ದ 100 ದಿನಗಳನ್ನು 125 ದಿನಗಳವರೆಗೆ ಹೆಚ್ಚಿಸಲಾಗಿದೆ ಜೊತೆಗೆ ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಗ್ರಾಮಸಭೆಗಳನ್ನು ನಡೆಸುವುದು ಅತ್ಯವಶ್ಯಕ. ಭ್ರಷ್ಟಾಚಾರ ತಡೆಗೆ ಈ ಕಾಯ್ದೆ ಹೆಚ್ಚಿನ ಶಕ್ತಿಯನ್ನು ನೀಡಿದೆ ಎಂದು ತಿಳಿಸಿದರು.
ಕಲಬುರಗಿಯ ಇಎಸ್‌ಐ ಉಪ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಯುವರಾಜ್ ಎಸ್.ವಿ. ಅವರು ನೂತನ ಕಾರ್ಮಿಕ ಸಂಹಿತೆಗಳ ಕುರಿತು ವಿವರಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನ ಕುರಿತು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಪಿಎಂ ಸ್ವನಿಧಿ ಯೋಜನೆ ಕುರಿತು ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಡಾ.ಎಸ್. ಸೌಮ್ಯ ಅವರು ಮಾಹಿತಿ ಹಂಚಿಕೊAಡರು.
ಕಾರ್ಯಾಗಾರದ ಎರಡನೇ ಅಧಿವೇಶನದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಸಾಕ್ಷ್ಯಾ ಅಧಿನಿಯಮ, 2023 ಕುರಿತು ಮಾಜಿ ಜಿಲ್ಲಾ ಸರ್ಕಾರಿ ವಕೀಲರಾದ ಬಿ.ರವೀಂದ್ರನಾಥ ಮಾತನಾಡಿ, ಹೊಸ ಸಂಹಿತೆಗಳು ಪುರಾವೆಗಳ ಬಲವರ್ಧನೆ, ತಂತ್ರಜ್ಞಾನದ ಮೂಲಕ ಪುರಾವೆಗಳ ಸಂಗ್ರಹಕ್ಕೆ ಹೆಚ್ಚು ಪೂರಕವಾಗಿವೆ. ಈ ಹಿಂದೆ ಇದ್ದ ಕೆಲ ಸಂಹಿತೆಗಳಲ್ಲಿ ಗೊಂದಲಗಳಿದ್ದವು, ಬಹುತೇಕ ಬಾರಿ ಪುರಾವೆಗಳ ಅಲಭ್ಯತೆಯೂ ಇರುತ್ತಿತ್ತು. ಇದರಿಂದಾಗಿ ಅಪರಾಧಿಗಳು ಹಲವು ಸಂದರ್ಭಗಳಲ್ಲಿ ನಿರಪರಾಧಿಗಳಾಗುತ್ತಿದ್ದರು. ಇದರಿಂದ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಈಗ ಹೊಸ ಸಂಹಿತೆಗಳಲ್ಲಿ ಸ್ಪಷ್ಟತೆ ದೊರಕಿವೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರದೀಪ್, ಕೃಷಿ, ತೋಟಗಾರಿಕಾ ವಲಯದ ಯೋಜನೆಗಳ ಅನುಷ್ಠಾನದ ಕುರಿತು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ಪಾಟೀಲ್, ಹಣಕಾಸು ಸುರಕ್ಷತೆ ಮತ್ತು ಆರ್ಥಿಕ ಸಬಲೀಕರಣದ ಕುರಿತು ಬಳ್ಳಾರಿ ಲೀಡ್ ಬ್ಯಾಂಕ್ ಸಂಯೋಜಕರಾದ ಅವರು ರಾಜಾಸಾಬ್ ಎರಿಮನಿ ಹೆಚ್. ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆಯ ಹೆಚ್ಚುವರಿ ಮಹಾನಿರ್ದೇಶಕರಾದ ಎಸ್.ಜಿ.ರವೀಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ವಿ.ಸಿ.ಗುರುರಾಜ್ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article