ಮಣ್ಣಿಗೆ ಜೀವವಿದೆ; ಕಾಲಕಾಲಕ್ಕೆ ಮಣ್ಣಿನ ಪರೀಕ್ಷೆ ಅಗತ್ಯ : ಶಾಸಕ ಬಾಬಾಸಾಹೇಬ ಪಾಟೀಲ

Hasiru Kranti
 ಮಣ್ಣಿಗೆ ಜೀವವಿದೆ; ಕಾಲಕಾಲಕ್ಕೆ ಮಣ್ಣಿನ ಪರೀಕ್ಷೆ ಅಗತ್ಯ : ಶಾಸಕ ಬಾಬಾಸಾಹೇಬ ಪಾಟೀಲ
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು: ಕೃಷಿ ಇಲಾಖೆ, ಡಿಎಟಿಸಿ ಅರಂಭಾವಿ, ಮ.ಸ.ಸ. ಕಾರ್ಖಾನೆ ಮತ್ತು ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರೈತ ದಿನಾಚರಣೆಯ ಪ್ರಯುಕ್ತ, ಕಬ್ಬು ಬೆಳೆ, ಸಮಗ್ರ ನೀರು, ಮತ್ತು ಮಣ್ಣು ನಿರ್ವಹಣೆ ಕುರಿತು ನಡೆದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಶಾಸಕ ಬಾಬಾಸಾಹೇಬ ಪಾಟೀಲ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಮಣ್ಣಿಗೆ ಜೀವವಿದೆ. ಕಾಲಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸಿ ಅದಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡಬೇಕು,” ಎಂದು ರೈತರಿಗೆ ಕರೆ ನೀಡಿದರು. ಕೇವಲ ನೀರುಣಿಸುವುದರಿಂದ ಬೆಳೆ ಇಳುವರಿ ಬರುವುದಿಲ್ಲ. ಬದಲಿಗೆ, ಭೂಮಿಗೆ ತಕ್ಕಂತೆ ಸಾವಯವ ಗೊಬ್ಬರ ಮತ್ತು ನಿರ್ದಿಷ್ಟ ಪ್ರಮಾಣದ ನೀರು ಪೂರೈಸಿದಾಗ ಮಾತ್ರ ಉತ್ತಮ ಬೆಳೆ ಬರಲು ಸಾಧ್ಯ ಎಂದು ಅವರು ಒತ್ತಿ ಹೇಳಿದರು.

ಅಧಿಕಾರಿಗಳು ಮೂರು ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡರೆ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ. ರೈತರು ಜಮೀನಿನ ಮಣ್ಣನ್ನು ತಜ್ಞರಿಂದ ಪರೀಕ್ಷಿಸಿ, ಅದರ ವಿಶ್ಲೇಷಣಾ ಫಲಿತಾಂಶ ಆಧಾರದ ಮೇಲೆ ಸೂಕ್ತ ಸಮತೋಲನ ರಸಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ಬಳಸಿ, ಉತ್ತಮ ಇಳುವರಿ ಪಡೆಯಬೇಕು ಎಂದು ಸಲಹೆ ನೀಡಿದರು. ಅವರು ಯುವಕರು ಕೃಷಿಗೆ ಹೆಚ್ಚು ಒತ್ತು ನೀಡಬೇಕೆಂದು ಮನವಿ ಮಾಡಿದರು.

ಮತ್ತಿಕೊಪ್ಪ ಕೃಷಿ ಸಂಶೋಧನಾ ವಿಜ್ಞಾನಿ ಡಾ. ಮಂಜುನಾಥ ಚೌರಡ್ಡಿ ಮಾತನಾಡಿ ರೈತರು ಭೂಮಿಯಲ್ಲಿ ಗುಣಿ ಪದ್ಧತಿ ಮತ್ತು ಹನಿ ನೀರಾವರಿ ಅಳವಡಿಸುವುದರಿಂದ ಕಬ್ಬು ಹೆಚ್ಚು ಇಳುವರಿ ನೀಡುತ್ತದೆ. ಸಸಿ ಇರುವಾಗ ರಾಸಾಯನಿಕ ಬದಲಿಗೆ ಸಾವಯವ ಗೊಬ್ಬರ ಹಾಗೂ ಕಬ್ಬಿಗೆ ಸಮರ ಪೋಷಕಾಂಶ ಇದರ ಜೊತೆಯಲ್ಲಿ ರಸಾಯನಿಕ ಗೊಬ್ಬರ ಬಳಸಿ. ಯೂರಿಯಾ ಕಡಿಮೆ ಮಾಡಿ ಸಾವಯವ ಬಳಕೆಯನ್ನು ಹೆಚ್ಚಿಸಬೇಕು ಎಂದು ಹೇಳಿದರು.

ಸಂಕೇಶ್ವರ ಸಂಶೋಧನಾ ಕೇಂದ್ರ ವಿಜ್ಞಾನಿ ಡಾ. ಎಸ್.ಎಸ್. ನೂಲಿ ಮಾತನಾಡಿ ಭೂಮಿ ಹದ ಮಾಡಲು ಬೆಳಗಿನ ಸಮಯ ಸೂಕ್ತ. ಅಕ್ಟೋಬರ್ ತಿಂಗಳಲ್ಲಿ ಹಚ್ಚಿದ ಕಬ್ಬು ಹೆಚ್ಚು ಇಳುವರಿ ನೀಡುತ್ತದೆ. ರೈತರು ೮-೧೦ ತಿಂಗಳ ಬೆಳೆದ ಕಬ್ಬಿನ ಬೀಜ ಮಾಡಿಕೊಳ್ಳುವುದು ಉತ್ತಮ. ಬೆಳೆಗೆ ಬೆಳಕು ಬೀಳುವಂತೆ ಅಂತರ ಬಿಟ್ಟು ಬೀಜ ನಾಟಿ ಮಾಡಿ. ಸರಿಯಾಗಿ ನಿರ್ವಹಣೆ ಮಾಡದಿದ್ದರೆ ರೋಗಗಳು ಅಂಟಿಕೊಳ್ಳುತ್ತವೆ. ಮಣ್ಣಿನ ಆರೋಗ್ಯ ಚೀಟಿಯ ಆಧಾರದ ಮೇಲೆ ಗೊಬ್ಬರ ಮತ್ತು ಔಷಧಿ ಬಳಸಿ, ಹನಿ ನೀರಾವರಿ ಬಳಸಲು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿಗೆ ಸಂಬಂಧಿಸಿದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು ಮತ್ತು ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಪಡೆಪ್ಪ ಬೋಗೂರ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪ ಕೃಷಿ ನಿರ್ದೇಶಕ ಸಲೀಂ ಸಂಗತ್ರಾಸ್, ಡಿಎಟಿಸಿ ಅರಂಭಾವಿ ಸಹಾಯಕ ನಿರ್ದೇಶಕಿ ಲೀಲಾ ಕೌಜಗೇರಿ, ಹಾಗೂ ಇತರರು ಭಾಗವಹಿಸಿದ್ದರು.

ಈ ವೇಳೆ ಕೃಷಿ ಇಲಾಖೆಯ ಜಿಲ್ಲಾ ಹಂತದ ಅದಿಕಾರಿಗಳು, ಪ್ರಗತಿಪರ ರೈತರು, ಪಟ್ಟಣದ ನಾಗರಿಕರು ಸೇರಿದಂತೆ ಇತರರಿದ್ದರು.

ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ ಸ್ವಾಗತಿಸಿದರು, ಕೃಷಿ ಅಧಿಕಾರಿ ಮಂಜುನಾಥ ಕೆಂಚರಾವುತ ನಿರೂಪಿಸಿದರು.

ಪೋಟೋ ಶಿರ್ಷಿಕೆ: ಶಾಸಕ ಬಾಬಾಸಾಹೇಬ ಪಾಟೀಲ ಅವರು ಮಾತನಾಡಿದರು.

WhatsApp Group Join Now
Telegram Group Join Now
Share This Article