ಧಾರವಾಡ: ಸಂಶೋಧನೆಗಳು ಕಲಿಕೆಗೆ ಮಾತ್ರ ಸೀಮಿತವಾಗದೇ ಸಮಾಜದ ಸಮಸ್ಯೆಗಳ ನಿವಾರಣೆ ಪೂರಕವಾಗಬೇಕು. ಯುವ ಸಮುದಾಯವು ಭಾರತ ದೇಶದ ಭವಿಷ್ಯವಾಗಿದ್ದು, ಉನ್ನತ ಶಿಕ್ಷಣ ಪಡೆದ ಪದವಿಧರರು ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂದು ನವದೆಹಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಪ್ರೊ.ಅಭಯ ಕರಂಡೀಕರ್ ತಿಳಿಸಿದರು.
ನಗರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಭಾರತೀಯ ತಂತ್ರಜ್ಞಾನ ಸಂಸ್ಥೆ ಧಾರವಾಡದ ಆರನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವದಲ್ಲೇ ಭಾರತವು ಅತಿವೇಗವಾಗಿ ಪ್ರಗತಿ ಸಾಧಿಸುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಯುವ ಸಂಶೋಧಕರು ಮಾಡುವ ಸಂಶೋಧನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕು. ವೈಜ್ಞಾನಿಕ ದೃಷ್ಟಿಕೋನದಲ್ಲಿ ಸಂಶೋಧನೆಗಳು ನಡೆದರೇ ದೇಶವು ಪ್ರಗತಿಯತ್ತ ಸಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ದೇಶವು ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆ. ಅಧ್ಯಯನಕ್ಕೆ ಅನುಕೂಲ ಆಗುವಂತೆ ಸೌಲಭ್ಯಗಳನ್ನು ನೀಡಿದೆ. ವಿಕಸಿತ ಭಾರತ ಕನಸು ನನಸು ಮಾಡಲು ಪದವಿಧರರ ವಿದ್ಯಾರ್ಥಿಗಳ ಮೇಲೆ ದೇಶವು ಹೂಡಿಕೆ ಮಾಡಿದೆ. ಸಿಕ್ಕಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಯುವ ಸಂಶೋಧಕರು ದೇಶಕ್ಕೆ ತಮ್ಮ ಋಣಸಂದಾಯ ಮಾಡಬೇಕು ಎಂದು ಕರೆ ನೀಡಿದರು.
ಕಲಿಕೆ ಎನ್ನುವುದು ಸಣ್ಣದಲ್ಲ, ದೊಡ್ಡದು ಎಷ್ಟು ಅಧ್ಯಯನ ಮಾಡಿದರು ಕಡಿಮೆ, ಎಷ್ಟು ಪ್ರಗತಿ ಹೊಂದಿದರೂ ಕಡಿಮೆಯಾಗಿದೆ. ಎಲ್ಲರಿಗೂ ಉನ್ನತ ಅವಕಾಶಗಳು ಸಿಗುತ್ತಿವೆ. ಅವುಗಳನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದುವುದು ನಮ್ಮ ಮೇಲಿದೆ. ಎಐ ತಂತ್ರಜ್ಞಾನದ ಯುಗದಲ್ಲಿ ಸಂಶೋಧಕರು ತಮ್ಮ ಜ್ಞಾನ ಸಂಪತ್ತನ್ನು ಬಹಳಷ್ಟು ಸಕಾರಾತ್ಮವಾಗಿ ಬಳಸಿಕೊಂಡು ವಿಕಸಿತ ಭಾರತ ಕನಸು ನನಸು ಮಾಡಲು ಪ್ರಯತ್ನಿಸಿ, ದೇಶವನ್ನು ಉತ್ತುಂಗಕ್ಕೆ ಏರಿಸಿ ಎಂದರು.
ಗೋವಾ ಭಾರತೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಧೀರೇಂದ್ರ ಕಟ್ಟಿ ಮಾತನಾಡಿ, ಭಾರತ ಸರಕಾರ ಇಂದು ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗುತ್ತಿದೆ. ಪ್ರಧಾನಮಂತ್ರಿಗಳ ಆಶಯ ದೇಶದ ವಿಕಾಸವಾಗಿದೆ. ಭಾರತ ದೇಶವು ತ್ವರಿತವಾಗಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತಿದೆ. ಪದವಿಧರರು ದೇಶದ ಭವಿಷ್ಯವನ್ನು ನಿರ್ಧರಿಸುವ ಶಕ್ತಿ ಹೊಂದಿದ್ದಾರೆ. ತಮ್ಮ ಜ್ಞಾನ ಸಂಪತ್ತು ದೇಶದ ಅಭಿವೃದ್ಧಿಗೆ ಪೂರಕವಾಗಿಸಿ ಪ್ರತಿಯೊಬ್ಬ ಪದವಿಧರರು ಮೌಲ್ಯಯುತ ಜೀವನ ನಡೆಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಯಶಸ್ಸಿನ ಬೆನ್ನಿಗೆ ಬಿದ್ದು, ತಮ್ಮ ಜ್ಞಾನ ಸಂಪತ್ತು ಹೆಚ್ಚಿಸಿಕೊಂಡು, ಸಂಶೋಧನೆಯಲ್ಲಿ ತೊಡಗಿದರೇ ಜೀವನದಲ್ಲಿ ಗೌರವ ಹಾಗೂ ಸಂಪಾದನೆ ತಾನಾಗಿಯೇ ನಿಮ್ಮ ಬಳಿ ಬರುತ್ತದೆ. ಬೇರೆ ಬೇರೆ ದೇಶಗಳಿಗೆ ಹೊಲಿಸಿದಾಗ ಭಾರತ ಅತಿ ವೇಗವಾಗಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ತ್ವರಿತ ಪ್ರಗತಿ ಸಾಧಿಸುತ್ತಿದೆ. ಸಮಾಜದಲ್ಲಿ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಪ್ರತಿಯೊಂದು ಸಂಶೋಧನೆಗಳು ಮಾಡಿದರೇ ಭಾರತ ವಿಶ್ವಗುರುವಾಗುತ್ತದೆ ಎಂದರು.
ಪ್ರೊ. ವೆಂಕಪ್ಪಯ್ಯ ದೇಸಾಯಿ ಮಾತನಾಡಿ, ಐಐಟಿ ಧಾರವಾಡ ಆರಂಭದಿಂದಲ್ಲೂ ಅಭಿವೃದ್ಧಿ ತಂತ್ರಜ್ಞಾನ ಅಳವಡಿಕೆ ಕುರಿತು ಸಂಶೋಧನೆ ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ಜ್ಞಾನ ಒದಗಿಸುವ ಕೆಲಸ ಮಾಡುತ್ತಿದೆ. ಅಧ್ಯಯನದಲ್ಲಿ ಹೊಸ ಹೊಸ ವಿಭಾಗಗಳನ್ನು ಆರಂಭಿಸುವ ಮೂಲಕ ಕೌಶಲ್ಯಗಳನ್ನು ಬೆಳೆಸುವ ಕೆಲಸ ಮಾಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ೨೨೭ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎರಡು ಚಿನ್ನದ ಪದಕ, ಆರು ಬೆಳ್ಳಿ ಪದಕ ಮತ್ತು ಒಂದು ನಗದು ಬಹುಮಾನ ಒಳಗೊಂಡು ಬಿ.ಟೆಕ್ ೧೩೮, ಎಂ.ಟೆಕ್ ೩೦, ಎಂ.ಎಸ್ ೧೩, ಪಿ.ಹೆಚ್.ಡಿ ಅಧ್ಯಯನ ಮಾಡಿದ ೨೦ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ವೇಳೆ ಪ್ರೊ.ಎಸ್.ಎಸ್.ಮೂರ್ತಿ, ಕುಲಸಚಿವ ಡಾ.ಕಲ್ಯಾಣ ಕುಮಾರ ಭಟ್ಟಾಚಾರ್ಯ, ಪ್ರೊ. ನವೀನ್ ಎಂ.ಬಿ ಹಾಗೂ ಪ್ರೊ. ಸೂರ್ಯ ಪ್ರತಾಪ್ ಸಿಂಗ್ ಇದ್ದರು.