“ಬಿತ್ತನೆ ಬೀಜಗಳ ಬೆಲೆ ಹೆಚ್ಚಳವನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿಗಳ ನಡೆ ರೈತ ವಿರೋಧಿ”

Ravi Talawar
 “ಬಿತ್ತನೆ ಬೀಜಗಳ ಬೆಲೆ ಹೆಚ್ಚಳವನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿಗಳ ನಡೆ ರೈತ ವಿರೋಧಿ”
WhatsApp Group Join Now
Telegram Group Join Now
ಕುರುಗೋಡು,31: ಪಟ್ಟಣದಲ್ಲಿ ಬಿತ್ತನೆ ಬೀಜಗಳ ಬೆಲೆ ಹೆಚ್ಚಳದ  ಕ್ರಮವನ್ನು  ಸಮರ್ಥಿಸುವ ಮಾನ್ಯ ಮುಖ್ಯಮಂತ್ರಿಗಳ ನಿಲುವನ್ನು ಹಿಂತೆಗೆದುಕೊಂಡು, ಬೆಲೆ ಹೆಚ್ಚಳವನ್ನು ಹಿಂತೆಗೆದುಕೊಳ್ಳಲು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎ ಐ ಕೆ ಕೆ ಎಂ ಎಸ್) ಪ್ರತಿಭಟನೆ ಮಾಡಿ ಮಾನ್ಯ ಗ್ರೇಡ್ 2  ತಹಶೀಲ್ದಾರ್ ವಿಜಯ ಕುಮಾರ್ ಅವರ ಮೂಲಕ ಮನವಿ ಸಲ್ಲಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ರಾಜ್ಯ ಸರ್ಕಾರವು ಬಿತ್ತನೆ ಬೀಜಗಳ  ದರ ಏರಿಸಿ ಅವರ ಗಾಯದ ಮೇಲೆ ಉಪ್ಪು ಸವರಿದಂತೆ ಮಾಡಿದೆ.
ಈ ಸಂದರ್ಭದಲ್ಲಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಬಿತ್ತನೆ ಬೀಜಗಳ ಬೆಲೆ ಹೆಚ್ಚಳವನ್ನು ಸಮರ್ಥಿಸಿಕೊಂಡು, ಬೇರೆ ರಾಜ್ಯಗಳಿಗೆ ಹೋಲಿಸಿ, ಅಲ್ಲಿಗಿಂತ ಇಲ್ಲಿ ಬಿತ್ತನೆ ಬೀಜದ ಬೆಲೆ ಕಡಿಮೆ ಇದೆ, ಎಂದು ತರ್ಕಬದ್ದವಲ್ಲದ ವಾದವನ್ನು ಮಂಡಿಸುತ್ತಿರುವುದು ರೈತ ವಿರೋಧಿ ನಿಲುವನ್ನು ಎತ್ತಿ ತೋರಿಸುತ್ತದೆ.
ಪ್ರಸಕ್ತವಾಗಿ ರಾಜ್ಯದಲ್ಲೆಡೆ ಉತ್ತಮ ಮಳೆಯು ಬರುತ್ತಿರುವ ಈ ಸಮಯದಲ್ಲಿ ರೈತರ ಮೊಗದಲ್ಲಿ ಆಶಾಭಾವನೆಯು ಮೂಡಿತ್ತು. ಆದರೆ ಸರ್ಕಾರದ ಈ ದರ ಏರಿಕೆಯ ಹಿನ್ನೆಲೆಯಲ್ಲಿ ಬಿತ್ತನೆಯ ಮುಂಚಿತವಾಗಿಯೇ ನಿರಾಸೆಯಲ್ಲಿ ಅವರನ್ನು ದೂಡಲಾಗಿದೆ. ಈಗಾಗಲೇ ಬರಗಾಲದ ಪರಿಹಾರವನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ರೈತರಿಗೆ ನೀಡದೆ ಅವರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿವೆ. ಈ ಸಂದರ್ಭದಲ್ಲಿ ಉಚಿತವಾಗಿ ಕೊಡಬೇಕಾಗಿರುವ ಬೀಜಗಳನ್ನು ದುಬಾರಿ ದರದಲ್ಲಿ ನೀಡಲು ಮುಂದಾಗಿರುವುದು ಸರ್ಕಾರದ ರೈತ ವಿರೋಧಿ ಕ್ರಮವಾಗಿದೆ.
ಈಗಾಗಲೇ ರೈತರು ಮುಂಗಾರಿನ ಸಿದ್ಧತೆಯನ್ನು ಮಾಡಿಕೊಂಡಿದ್ದು ಒಂದೆಡೆ ದುಬಾರಿ ದರದಲ್ಲಿ ಬೀಜಗಳನ್ನು ಖರೀದಿಸಿ ಕಾರ್ಯ ಆರಂಭಿಸುವುದು ಅನಿವಾರ್ಯವಾಗುತ್ತಿದೆ. ಕಳೆದ ವರ್ಷ ರೈತರು ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದರು. ಈಗ ಮತ್ತೊಮ್ಮೆ ಸಾಲ ಮಾಡಿಕೊಂಡು ಬಿತ್ತನೆ ಕಾರ್ಯ ಮಾಡಬೇಕಾಗಿದೆ.
ಕೃಷಿ ಇಲಾಖೆಯ ರಿಯಾಯಿತಿ ದರದಲ್ಲಿ ವಿತರಿಸುವ ಬೀಜದ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರಿ ಹೆಚ್ಚಳವಾಗಿದೆ. ಪ್ರತಿ ಕೆಜಿಗೆ ವಿವಿಧ ಬಿತ್ತನೆ ಬೀಜದ ದರ ರೂಪಾಯಿ 2 ರಿಂದ ರೂಪಾಯಿ 61 ರವರೆಗೆ ಹೆಚ್ಚಳವಾಗಿದೆ. ಸಬ್ಸಿಡಿಯು ಐದು ಎಕರಿಗೆ ಮಾತ್ರ ರಿಯಾಯಿತಿ ನೀಡಲಾಗುತ್ತಿದ್ದು ಉಳಿದ ಬೀಜಗಳನ್ನು ಮಾರುಕಟ್ಟೆ ದರದಲ್ಲಿ ಖರೀದಿಸುವುದು ಅನಿವಾರ್ಯವಾಗುತ್ತಿದೆ.
ಆದ್ದರಿಂದ, ಸರ್ಕಾರವು ಕೂಡಲೇ ಬಿತ್ತನೆ ಬೀಜಗಳ ಮೇಲೆ ಹೆಚ್ಚಿರುವ ದರವನ್ನು ಹಿಂಪಡೆದು ಎಲ್ಲ ರೈತರಿಗೆ ಅವಶ್ಯಕತೆ ಇರುವಷ್ಟು ಉಚಿತವಾಗಿ ಬಿತ್ತನೆ ಬೀಜಗಳನ್ನು ಕೂಡಲೇ ವಿತರಿಸಬೇಕೆಂದು ನಾವು ಈ ಸಂದರ್ಭದಲ್ಲಿ ಒತ್ತಾಯಿಸುತ್ತೇವೆ. ಹಾಗೂ ಪ್ರತಿ ವರ್ಷದಂತೆ ಗೊಬ್ಬರದ ಕೊರತೆ ಎದುರಾಗದಂತೆ ಗಂಭೀರವಾದ ಕ್ರಮಗಳನ್ನು ತೆಗೆದುಕೊಂಡು ಎಲ್ಲಾ ಕಡೆಗಳಲ್ಲಿ ಸಮರ್ಪಕವಾದ ಗೊಬ್ಬರವನ್ನು ವಿತರಿಸಬೇಕೆಂದು ನಾವು ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ಪ್ರತಿಭಟನಾಕಾರರು  ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯ ಈ.ಹನುಮಂತಪ್ಪ, ಜಿಲ್ಲಾ  ಅಧ್ಯಕ್ಷ ಗೋವಿಂದ್, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ತಾಲೂಕು ಅಧ್ಯಕ್ಷ ಲಿಂಗಪ್ಪ, ಕಾರ್ಯದರ್ಶಿ ಕೆರೆಕೆರೆ ಬಸವರಾಜ್,  ಯುವಜನ ಮುಖಂಡ ಪಂಪಾಪತಿ, ಜಂಟಿ ಕಾರ್ಯದರ್ಶಿ ಮಣಿಕಂಠ , ರೈತ ಮುಖಂಡ ಕಲ್ಲುಕಂಬ ಪಂಪಾಪತಿ, ಜಿಲ್ಲಾ ಸಮಿತಿ ಸದಸ್ಯರಾದ ಮಲ್ಲಪ್ಪ, ಹೊನ್ನೂರಪ್ಪ, ತಿಪ್ಪಯ್ಯ, ಓಬಲೇಶ, ರೈತರಾದ ಸಿದ್ದಪ್ಪ, ಅರ್ಜುನ್ , ಸಂಜೀವಪ್ಪ, ನಾಗಭೂಷಣ, ಎಸ್.ಎಂ. ವಿರೂಪಾಕ್ಷ ಸೇರಿದಂತೆ ಇತರರು ಇದ್ದರು
WhatsApp Group Join Now
Telegram Group Join Now
Share This Article