ಬಂಡೆ ಸಾಹೇಬ್ ಚಿತ್ರದ ಟೀಸರ್  ಬಿಡುಗಡೆ  

Ravi Talawar
ಬಂಡೆ ಸಾಹೇಬ್ ಚಿತ್ರದ ಟೀಸರ್  ಬಿಡುಗಡೆ  
WhatsApp Group Join Now
Telegram Group Join Now
ದಕ್ಷ ಪೊಲೀಸ್ ಅಧಿಕಾರಿ
ಮಲ್ಲಿಕಾರ್ಜುನ ಬಂಡೆ ಜೀವನಾಧಾರಿತ
      ಕಳೆದ ಕೆಲವುವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ರೌಡಿ ಶೀಟರ್ ಮುನ್ನಾನನ್ನು ಸೆರಹಿಡಿಯುವ ಸಂದರ್ಭದಲ್ಲಿ ಶೂಟೌಟ್ ಗೆ ಬಲಿಯಾದ ದಕ್ಷ ಪೊಲೀಸ್ ಅಧಿಕಾರಿ(ಪಿ.ಎಸ್.ಐ) ಹುತಾತ್ಮ ಮಲ್ಲಿಕಾರ್ಜುನ ಬಂಡೆ ಅವರ ಜೀವನಾಧಾರಿತ ಚಿತ್ರ ‘ಬಂಡೆ ಸಾಹೇಬ್’. ಇತ್ತೀಚೆಗೆ ಈ ಚಿತ್ರದ ಟೀಸರ್ ಅನಾವರಣ ಸಮಾರಂಭ ನಡೆಯಿತು.
      ನಟ ಶರಣ್ ಈ ಚಿತ್ರದ ಟೀಸರ್ ಅನಾವರಣ ಮಾಡಿದರು. ಇದೇ ಸಂದರ್ಭದಲ್ಲಿ ಅಪ್ಪು ಅವರಿಗಾಗಿ ಚಿತ್ರತಂಡ ಹಾಡೊಂದನ್ನು ಅರ್ಪಿಸಿದೆ.‌ ಈ ಹಾಡನ್ನು ನಿರ್ದೇಶಕ ತರುಣ್ ಸುಧೀರ್ ಹಾಗೂ ಶಾಸಕ‌ ರಾಜು ಗೌಡ ಬಿಡುಗಡೆ ಮಾಡಿದರು. ಡಿ.ಎಸ್ ಮ್ಯಾಕ್ಸ್ ನ ದಯಾನಂದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
      “ಈ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಮೊದಲು ತಂಡಕ್ಕೆ ಅಭಿನಂದನೆ ಸಲ್ಲಿಸಬೇಕು. ಟೀಸರ್ ನಲ್ಲೇ ಇನ್ನೂ ಏನೋ ಇದೆ ಅನ್ನುವಷ್ಟರಲ್ಲೇ ಟೀಸರ್ ಮುಗಿದು ಹೋಗಿರುತ್ತದೆ. ಈ ವಿಷಯಕ್ಕೆ ನಿಜಕ್ಕೂ ನಿರ್ದೇಶಕರನ್ನು ಶ್ಲಾಘಿಸಬೇಕು. ಸಂತೋಷ್ ರಾಮ್ ಅವರ ನಟನೆ ಕೂಡ ಚೆನ್ನಾಗಿದೆ. ಹುತಾತ್ಮ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ಜೀವನಾಧಾರಿತ ಈ ಸಿನಿಮಾವನ್ನು ನಾನು ಕೂಡ ತೆರೆಯ ಮೇಲೆ ನೋಡಲು ಕಾತುರನಾಗಿದ್ದೇನೆ” ಎಂದರು ನಟ ಶರಣ್.
      “ಅಪ್ಪು ಅವರಿಗೆ ಅರ್ಪಣೆಯಾದ ಗೀತೆ ಹೃದಯಕ್ಕೆ ಹತ್ತಿರವಾಯಿತು. ಟೀಸರ್ ಅಂತು ಟೀಸರ್ ಗೆ ಟೀಸರ್ ಇದ್ದ ಹಾಗೆ ಇದೆ. ಇಂತಹ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ ಹಾಗೂ ಚಿತ್ರತಂಡಕ್ಕೆ ಅಭಿನಂದನೆಗಳು. ಇನ್ನೂ, ಎಸ್ ಪಿ ಸಾಂಗ್ಲಿಯಾನ ಸಿನಿಮಾ ನೋಡಿದಾಗ ಶಂಕರ್ ನಾಗ್ ಅವರು‌ ಸಾಂಗ್ಲಿಯಾನ ಅವರ ಹಾಗೆ ಕಂಡರು. ಈಗ ಈ ಚಿತ್ರದ ನಾಯಕ ಸಂತೋಷ್ ರಾಮ್ ಅವರನ್ನು ನೋಡಿದಾಗ ಮಲ್ಲಿಕಾರ್ಜುನ ಬಂಡೆ ಅವರನ್ನೇ ನೋಡಿದ ಹಾಗೆ ಆಗುತ್ತಿದೆ” ಎಂದರು ನಿರ್ದೇಶಕ ತರುಣ್ ಸುಧೀರ್.
      “ನಿರ್ಮಾಪಕ ಗೋಪ್ಪಣ್ಣ ದೊಡ್ಮನಿ ಅವರು ನನ್ನ ಹಿರಿಯ ಸಹೋದರ ಇದ್ದಂತೆ. ಮೊದಲು ಅವರು ಸಿನಿಮಾ ಮಾಡುತ್ತೇನೆ ಎಂದಾಗ ಬೇಡ ಅಂದಿದ್ದೆ. ಈಗ ಅವರು ನಿರ್ಮಿಸಿರುವ ಮಲ್ಲಿಕಾರ್ಜುನ ಬಂಡೆ ಅವರ ಕುರಿತಾದ ಈ ಚಿತ್ರದ ಟೀಸರ್ ನೋಡಿ ಅವರು ಒಳ್ಳೆಯ ನಿರ್ಧಾರ ಮಾಡಿದ್ದಾರೆ‌ ಅನಿಸಿತು. ನಾವು ಮಲ್ಲಿಕಾರ್ಜುನ ಬಂಡೆ ಅವರನ್ನು ಹತ್ತಿರದಿಂದ ನೋಡಿದ್ದೇವೆ. ಈಗ ಸಂತೋಷ್ ರಾಮ್ ಅವರ ಅಭಿನಯ ನೋಡಿದಾಗ ಮಲ್ಲಿಕಾರ್ಜುನ ಬಂಡೆ ಅವರೆ ನೆನಪಾದರು. ದಕ್ಷ ಪೊಲೀಸ್ ಅಧಿಕಾರಿಯೊಬ್ಬರ ಕುರಿತಾದ ಈ ಚಿತ್ರವನ್ನು ಹೆಚ್ಚಿನ ಜನರು ನೋಡುವ ಮೂಲಕ ಪ್ರೋತ್ಸಾಹಿಸಿ” ಎಂದರು ಶಾಸಕ ರಾಜು ಗೌಡ.
      ಡಿ.ಎಸ್ ಮ್ಯಾಕ್ಸ್ ನ‌ ದಯಾನಂದ್ “ನಿರ್ಮಾಪಕರು  ಹಾಕಿದ ದುಡ್ಡಿಗೆ ಈ ಚಿತ್ರದಿಂದ ಹೆಚ್ಚು ಲಾಭ ಬರಲಿ” ಎಂದು ಹಾರೈಸಿದರು.
       “ನಿರ್ಮಾಪಕರು ನನ್ನ ಬಳಿ ಈ ಚಿತ್ರದ ಬಗ್ಗೆ ಹೇಳಿದಾಗ ನೈಜಘಟನೆ ಆಧಾರಿತ ಚಿತ್ರವನ್ನು ನಿರ್ದೇಶಿಸುವುದು ಸುಲಭವಲ್ಲ ಅನಿಸಿತು. ನಂತರ‌ ಕಥೆ ಇಷ್ಟವಾಗಿ ನಿರ್ದೇಶನಕ್ಕೆ ಮುಂದಾದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಚಿತ್ರೀಕರಣ‌ ಹಾಗೂ ನಂತರದ ಕಾರ್ಯಗಳು ಮುಕ್ತಾಯವಾಗಿರುವ ನಮ್ಮ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ” ಎಂದರು ನಿರ್ದೇಶಕ ಚಿನ್ಮಯ್ ರಾಮ್.
       ನಿರ್ಮಾಪಕ ಗೋಪಣ್ಣ ದೊಡ್ಮನಿ ಅವರ ಪುತ್ರಿ ಗೀತಾ “ನಮ್ಮ ಕುಟುಂಬದವರು ಮಲ್ಲಿಕಾರ್ಜುನ ಬಂಡೆ ಅವರ ಕುಟುಂಬದವರನ್ನು ಹತ್ತಿರದಿಂದ ನೋಡಿದ್ದೇವೆ. ಹುತಾತ್ಮ ಪಿ.ಎಸ್.ಐ ಅವರ ಕಾರ್ಯವೈಖರಿಯನ್ನು ಎಲ್ಲರಿಗೂ ತಿಳಿಸುವ ಸಲುವಾಗಿ ನಮ್ಮ ತಂದೆ ಈ ಚಿತ್ರ ನಿರ್ಮಾಣ ಮಾಡಿದ್ದಾರೆ” ಎಂದರು.
     “ನಾನು ಹಾಗೂ ವೀರಣ್ಣ ಕೊರಳ್ಳಿ ಅವರು ಗುಲ್ಬರ್ಗದಲ್ಲೇ ಎರಡು ತಿಂಗಳು ಇದ್ದು, ಮಲ್ಲಿಕಾರ್ಜುನ ಬಂಡೆ ಅವರ ಒಡನಾಡಿಗಳನ್ನು ಸಂಪರ್ಕ ಮಾಡಿದ್ದೆವು. ಆನಂತರ ಕಥೆ ಮೆಚ್ಚಿಕೊಂಡ ಗೋಪಣ್ಣ ದೊಡ್ಮನಿ ಅವರು ನಿರ್ಮಾಣಕ್ಕೆ ಮುಂದಾದರು. ಪಂಟ್ರು ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ನಾನು ಈ ಚಿತ್ರದಲ್ಲಿ ಮಲ್ಲಿಕಾರ್ಜುನ ಬಂಡೆ ಅವರ ಪಾತ್ರದಲ್ಲಿ ನಟಿಸಿದ್ದೇನೆ” ಎಂದು  ಹೇಳಿದರು ನಾಯಕ ಸಂತೋಷ್ ರಾಮ್.
      ನಾಯಕಿ ಕಾವ್ಯ ಭಾರದ್ವಾಜ್, ನಟ ಫರ್ವೆಜ್ ಸಿಂಹ, ಛಾಯಾಗ್ರಾಹಕ ಮುಂಜಾನೆ ಮಂಜು, ಸಂಗೀತ ನಿರ್ದೇಶಕ ಎಂ.ಎಸ್ ತ್ಯಾಗರಾಜ್, ಸಂಕಲನಕಾರ ಶೇಷಾಚಲ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ಅಲೆಕ್ಸಾ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
      ಮಲ್ಲಿಗೆ ಸಿನಿ ಕಂಬೈನ್ಸ್ ಲಾಂಛನದಲ್ಲಿ ಗೋಪಣ್ಣ ದೊಡ್ಮನಿ, ಕಮಲ ದೊಡ್ಮನಿ ಹಾಗೂ ಮಾಲ ವಿ  ಕೊರಳ್ಳಿ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ವೀರಣ್ಣ ಕೊರಳ್ಳಿ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
WhatsApp Group Join Now
Telegram Group Join Now
Share This Article