ಧಾರವಾಡ: ನವಲಗುಂದ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಆಗಿರುವ ಬೆಳೆಹಾನಿಗೆ ಪರಿಹಾರ ಹಾಗೂ ಬಿದ್ದ ಮನೆಗಳಿಗೆ ಪರಿಹಾರವನ್ನು ಸರಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ನವಲಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನಾ ಧರಣಿ ನಡೆಸಿದರು.
ರೈತ ಕುಟುಂಬಗಳು ಅತಿಯಾಗಿ ಸುರಿದ ಮಳೆಯಿಂದ ಸಂಕಷ್ಟ ಎದುರಿಸುವಂತಾಗಿದೆ. ಶಾಸಕರು ಹಾಗೂ ಸಚಿವರು ಪ್ರವಾಸ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ರೈತರ ಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ತುರ್ತಾಗಿ ಮಳೆಹಾನಿ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಧಾರವಾಡ ಜಿಲ್ಲೆಯಲ್ಲಿ ಲಕ್ಷಾಂತರ ರೈತರು ಬೆಳೆವಿಮೆ ತುಂಬಿದ್ದಾರೆ. ಅವರಿಗೆ ಸೂಕ್ತ ಬೆಳೆವಿಮೆ ನೀಡಿಲ್ಲ, ವಿಮಾ ಕಂಪನಿಗಳು ಜೊತೆಗೆ ಶಾಸಕರು ಹಾಗೂ ಸಚಿವರು ಒಪ್ಪಂದ ಮಾಡಿಕೊಂಡಿರುವುದು ಹಾಗೂ ಹಣಕಾಸಿನ ಅವ್ಯವಹಾರ ನಡೆದಿರುವ ಶಂಕೆ ಇದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸರಕಾರಕ್ಕೆ ಕಿವಿ ಕೇಳಿಸುವುದಿಲ್ಲ, ರೈತರ ಕಷ್ಟ ಅರ್ಥವಾಗುವುದಿಲ್ಲ, ಸಚಿವರು ಶಾಸಕರು ಬಂದು ಪ್ರವಾಸ ಮುಗಿಸಿ ಹೋಗಿದ್ದಾರೆ. ಆದರೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಪ್ರತಿಭಟನೆಯಲ್ಲಿ ನವಲಗುಂದ ಕ್ಷೇತ್ರದ ಬಿಜೆಪಿ ಮುಖಂಡರು. ರೃತರು ಪಾಲ್ಗೊಂಡಿದ್ದರು.