ಧಾರವಾಡ: ಧಾರವಾಡದಲ್ಲಿ ಕಳೆದ 21 ವರ್ಷಗಳಿಂದ ಧಾರವಾಡ ಜಂಬೂ ಸವಾರಿ ಉತ್ಸವ ಸಮಿತಿಯಿಂದ ನಡೆಯುತ್ತಿರುವ ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಅಕ್ಟೋಬರ್ 1 ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು”ಅಕ್ಟೋಬರ್ 1 ರಂದು ಮಧ್ಯಾಹ್ನ 12.45ಕ್ಕೆ ಗಾಂಧಿನಗರದ ಈಶ್ವರ ದೇವ ಸ್ಥಾನದಲ್ಲಿ ಅಂಬಾರಿಗೆ ಪೂಜೆ ನಡೆಯ ಲಿದ್ದು, ನಂತರ ಸಾರ್ವಜನಿಕ ಸಭೆ ನಡೆಯ ಲಿದೆ. ಮಧ್ಯಾಹ್ನ 2.30ಕ್ಕೆ ಜಂಬೂಸವಾರಿ ಮೆರವಣಿಗೆ ಚಾಲನೆ ನೀಡಲಾಗುವುದು ಎಂದರು.
ಮಾಜಿ ಸಿಎಂ ಹಾಗೂ ಸಂಸದ ಜಗದೀಶ ಶೆಟ್ಟರ್ ಕಾರ್ಯಕ್ರಮ ಉದ್ಘಾಟಿಸುವರು. ಜಂಬೂ ಸವಾರಿಗೆ ಸಚಿವ ಸಂತೋಷ ಲಾಡ್ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗಹಿಸಲಿದ್ದಾರೆ. ಮೇಯರ್ ಜ್ಯೋತಿ ಪಾಟೀಲ ಹಾಗೂ ಸ್ಥಳೀಯ ಶಾಸಕರು ಭಾಗವಹಿಸುವರು ಎಂದು ಹೇಳಿದರು.
ಹುಬ್ಬಳ್ಳಿಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ
ಸ್ವಾಮೀಜಿ ಹಾಗೂ ಹಾರನಹಳ್ಳಿಯ ಕೋಡಿಮಠದ ರಾಜಯೋಗೀಂದ್ರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಚಾಲನೆ ಸಿಗಲಿದೆ. ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ, ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ, ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ, ಉಪ್ಪಿನ ಬೆಟಗೇರಿಯ ವಿರುಪಾಕ್ಷ ಸ್ವಾಮೀಜಿ ಹಾಗೂ ಹುನಗುಂದ ಮಠದ ವೀರೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ ಎಂದು ವಿವರಿಸಿದರು.
ಜಂಬೂ ಸವಾರಿಯು ಈಶ್ವರ ದೇವಸ್ಥಾನದಿಂದ ಆರಂಭಗೊಳ್ಳಲಿದೆ. ವಿದ್ಯಾಗಿರಿ. ಹೊಸಯಲ್ಲಾಪುರ, ಗಾಂಧಿ ಚೌಕ್, ಕೆ.ಸಿಸಿ. ಬ್ಯಾಂಕ್, ಸುಭಾಷ ರಸ್ತೆ, ಹಳೇಬಸ್ ನಿಲ್ದಾಣ ಮಾರ್ಗವಾಗಿ ಮೆರವಣಿಗೆ ಕಡಪಾ ಮೈದಾನಕ್ಕೆ ಬಂದು ತಲುಪಲಿದೆ. ಐರಾಣಿ ಹಾಗೂ ಶ್ರೀ ಶೈಲ ಮಠದ ಎರಡು ಆನೆಗಳು, 2 ಕುದುರೆ, 2 ಎತ್ತುಗಳು ಹಾಗೂ 50ಕ್ಕೂ ಹೆಚ್ಚು ಕಲಾ ತಂಡಗಳಿಂದ ಮೆರವಣಿಗೆ ನಡೆಯಲಿದೆ. ಜಂಬೂ ಸವಾರಿಗೆ ಧಾರವಾಡದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹುಣಸಿಮರದ ಮತ್ತು ಸಂಘಟಕರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ನಾರಾಯಣ ಕೋಪರ್ಡೆ, ಪಾಂಡುರಂಗ ಕಿರೇಸೂರ, ವಿಲಾಸ ತಿಬೇಲಿ, ಹನುಮೇಶ ಸರಾಫ್ ಉಪಸ್ಥಿತರಿದ್ದರು.


