ಬೆಳಗಾವಿ: ಗೋವಾ ಬಸ್ ತಡೆದು ಮಹದಾಯಿ, ಕಳಸಾ-ಬಂಡೂರಿ ಹೋರಾಟಗಾರರು ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.
ಕೇಂದ್ರದ ಪ್ರವಾಹ ತಂಡದ ಅಧಿಕಾರಿಗಳು ನಿನ್ನೆ ಮಹದಾಯಿ ಜಲಾನಯನ ಪ್ರದೇಶಕ್ಕೆ ಭೇಟಿ ನೀಡಿದ್ದನ್ನು ಖಂಡಿಸಿ ಸುರಿಯುವ ಮಳೆಯನ್ನೂ ಲೆಕ್ಕಿಸದೇ ಕೈಯಲ್ಲಿ ಬುಟ್ಟಿ, ಪಿಕಾಸಿ ಹಿಡಿದಿದ್ದ ರೈತ ಮುಖಂಡರು, ಕರವೇ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮತ್ತು ಗೋವಾ ಸಿಎಂ ಪ್ರಮೋದ ಸಾವಂತ ಅವರ ಭಾವಚಿತ್ರ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಆಗಮಿಸಿದ ಗೋವಾ ಬಸ್ ತಡೆದ ಹೋರಾಟಗಾರರು ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಓರ್ವ ಮಹಿಳೆ ಗೋವಾ ಬಸ್ ಏರಿದ ಘಟನೆಯೂ ನಡೆಯಿತು. ಬಳಿಕ ಆ ಮಹಿಳೆಯನ್ನು ಬಸ್ನಿಂದ ಕೆಳಗಿಳಿಸಲಾಯಿತು.
ಇದಕ್ಕೂ ಮೊದಲು ಮಾತನಾಡಿದ ಕರವೇ ಮುಖಂಡ ವಾಜೀದ್ ಹಿರೇಕೊಡಿ, ”ಸುಪ್ರೀಂಕೋರ್ಟ್ ಆದೇಶ ನೀಡಿದರೂ ನೀರು ಬಿಡುತ್ತಿಲ್ಲ. ಜುಲೈ 21ರೊಳಗೆ ಕೆಲಸ ಪ್ರಾರಂಭವಾಗಬೇಕು. ಇಲ್ಲದಿದ್ದರೆ ನಾವೇ ಕಣಕುಂಬಿಗೆ ಹೋಗಿ ಗೋವಾ ಸರ್ಕಾರ ನಿರ್ಮಿಸಿರುವ ತಡೆಗೋಡೆ ಒಡೆಯುತ್ತೇವೆ. ಕಾಮಗಾರಿಗೆ ಇದೇ ರೀತಿ ವಿರೋಧ ವ್ಯಕ್ತಪಡಿಸಿದರೆ ಗೋವಾಗೆ ಹಾಲು, ತರಕಾರಿ ಸೇರಿ ಮತ್ತಿತರ ಸಾಮಗ್ರಿಗಳು ಹೋಗದಂತೆ ತಡೆಯಬೇಕಾಗುತ್ತದೆ” ಎಂದು ಎಚ್ಚರಿಸಿದರು.