ಪ್ರಯಾಗ್ ರಾಜ್: ಉತ್ತರ ಪ್ರದೇಶದಲ್ಲಿ 12 ವರ್ಷಗಳಿಗೆ ಒಮ್ಮೆ ನಡೆಯುವ ಮಹಾ ಕುಂಭ ಮೇಳಕ್ಕೆ ಭರದಿಂದ ಸಿದ್ಧತೆ ಸಾಗಿದ್ದು, ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮಹಾ ಕುಂಭಮೇಳಕ್ಕಾಗಿ ಪ್ರಯಾಗ್ರಾಜ್ಗೆ ಭೇಟಿ ನೀಡುವ 40 ಕೋಟಿಗೂ ಹೆಚ್ಚು ಜನರಿಗೆ 7 ಸುತ್ತಿನ ಭದ್ರತೆಯ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಜನರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ರೈಲು ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಇತರ ಪ್ರಮುಖ ಮಾರ್ಗದಲ್ಲಿ ತಾತ್ಕಾಲಿಕ ಪೊಲೀಸ್ ಠಾಣೆ ಮತ್ತು ಚೆಕ್ಪೋಸ್ಟ್ ಗಳನ್ನು ಸ್ಥಾಪಿಸಲು ಸ್ಥಳೀಯ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಬಿಡಿಡಿ ಮತ್ತು ಎಎಸ್ ಚೆಕ್ ತಂಡಗಳನ್ನು ನಿಯೋಜಿಸುವ ಮೂಲಕ ಭದ್ರತೆಯನ್ನು ಮತ್ತಷ್ಟು ಬಲಗೊಳಿಸಲಿದೆ. ಈ ಘಟಕಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಇರಿಸಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.