ಬೆಂಗಳೂರು,ಜ.6: ಆಚಾರ್ಯ ಪಾಠಶಾಲಾ ಶಿಕ್ಷಣಸಂಸ್ಥೆ ವತಿಯಿಂದ ನಡೆದ ಬ್ರೈಲ್ ದಿನ ಕಾರ್ಯಕ್ರಮವನ್ನು ದೂರದರ್ಶನದ ಸಹಾಯಕ ನಿರ್ದೇಶಕರಾದ ಮೇಘನಾ ಕೆ. ಟಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವಿಷ್ಣು ಭರತ್ ಆಲಂಪಲ್ಲಿ, ನರ್ಮದ ವಿಭಿನ್ನ ಚೇತನರ ಸಾಮರ್ಥ್ಯ ಘಟಕದ ಸಂಯೋಜಕರು ಹಾಗೂ ಸಂಸ್ಥೆಯ ಉಪನ್ಯಾಸಕಿ ಎಸ್. ಹೇಮಾವತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ವಿವಿಧ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿಶೇಷ ಚೇತನ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ಉನ್ನತ ವ್ಯಾಸಂಗ ಕೈಗೊಂಡಿರುವ ಹಿರಿಯ ವಿದ್ಯಾರ್ಥಿಗಳನ್ನೂ ಅಭಿನಂದಿಸಲಾಯಿತು. ಅಂಧರ ಅಂದದ ಅಂಗಳ ಪುಸ್ತಕವನ್ನು ಗಣ್ಯರು ಲೋಕಾರ್ಪಣೆ ಮಾಡಿದರು.
ಬಳಿಕ ಕಾರ್ಯಕ್ರಮದಲ್ಲಿ ಮೇಘನಾ ಕೆ. ಟಿ, ನಮ್ಮಲ್ಲಿ ಯಾವುದೇ ನ್ಯೂನ್ಯತೆ ಇದ್ದರೂ ಅದರ ಬಗ್ಗೆ ಸದಾ ಕೊರಗಿ ಕುಗ್ಗದೆ ಅದನ್ನು ಸವಾಲಾಗಿ ಸ್ವೀಕರಿಸಿ ಹೊಸ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು. ಯಾವುದೇ ಕೊರತೆ ನಮ್ಮನ್ನು ಕುಗ್ಗಿಸುವುದು ಸಹಜ, ಆದರೆ ಅದನ್ನು ಮೀರಿ ನಾವು ಬೆಳೆಯಬೇಕು ಎಂದರು.
ಲೂಯಿ ಬ್ರೈಲ್ ಕೇವಲ ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಬ್ರೈಲ್ ಲಿಪಿಯ ಅದ್ಭುತ ಆಲೋಚನೆ-ಆವಿಷ್ಕಾರದ ಮೂಲಕ ಸಮುದಾಯಕ್ಕೆ ಬೆಳಕಾಗಿದ್ದಾರೆ ಎಂದು ತಿಳಿಸಿದರು.
ಡಾ. ವಿಷ್ಣು ಭರತ್ ಆಲಂಪಲ್ಲಿ ಮಾತನಾಡಿ, ವಿಶೇಷ ಚೇತನ ಮಕ್ಕಳಿಗೆ ಎಲ್ಲ ರೀತಿಯ ಬೆಂಬಲ, ಪ್ರೋತ್ಸಾಹ ಒದಗಿಸಲಾಗುತ್ತಿದೆ. ದೇವರು ದೃಷ್ಠಿಯಲ್ಲಿ ಕೊರತೆ ಮಾಡಬಹುದು, ಆದರೆ ಹತ್ತಾರು ಪ್ರತಿಭೆ, ಕಲೆ, ಸಾಮರ್ಥ್ಯಗಳನ್ನೂ ಜೊತೆಗೆ ನೀಡಿರುತ್ತಾನೆ. ಅಳುಕದೆ ಮುಂದೆ ಸಾಗಬೇಕು ಎಂದರು.
ಎಸ್. ಹೇಮಾವತಿ ಮಾತನಾಡಿ, ಶಿಕ್ಷಣದ ಜೊತೆಗೆ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಅಂಧರ ಶ್ರೇಯೋಭಿವೃದ್ಧಿಗೆ ಶಾಲೆ ಶ್ರಮಿಸುತ್ತಿದೆ ಎಂದು ಹೇಳಿದರು
ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆಯಿಂದ ಬ್ರೈಲ್ ದಿನ ಆಚರಣೆ: ಅಂಧರ ಅಂದದ ಅಂಗಳ ಪುಸ್ತಕ ಲೋಕಾರ್ಪಣೆ


