ಬೆಂಗಳೂರು, ಆ.30: ಖ್ಯಾತ ಚಿತ್ರನಟ ದಿವಂಗತ ಟಿ.ಎನ್. ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಾಣಕ್ಕಾಗಿ ಮಂಜೂರು ಮಾಡುವಾಗ ವಿಧಿಸಿದ್ದ ಷರತ್ತುಗಳ ಉಲ್ಲಂಘನೆಯಾಗಿದ್ದು, ಈ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿಸಲು ಪತ್ರ ಬರೆಯಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ವಿಕಾಸೌಧದಲ್ಲಿಂದು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರಿಂದ ವಿಷ್ಣುವರ್ಧನ್ ಸ್ಮಾರಕ ಕುರಿತಂತೆ ಮನವಿ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಲಸಂದ್ರ ಗ್ರಾಮದ ಸರ್ವೆ ನಂ.26 ರಲ್ಲಿ 62 ಎಕರೆ20 ಗುಂಟೆ ಪ್ರದೇಶವನ್ನು “ತುರಹಳ್ಳಿ ರಾಜ್ಯ ಅರಣ್ಯ” ಎಂದು ಘೋಷಸಿ ಮೈಸೂರು ಸರ್ಕಾರ 1935ರಲ್ಲಿ ಅಧಿಸೂಚನೆ ಹೊರಡಿಸಿತ್ತು. 1980ರ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬರುವ ಮೊದಲು ಈ ಅರಣ್ಯ ಭೂಮಿಯ ಪೈಕಿ 20 ಎಕರೆ ಪ್ರದೇಶವನ್ನು ಖ್ಯಾತ ಚಿತ್ರನಟ ಟಿ.ಎನ್.ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಿಸುವ ಸಲುವಾಗಿ 1969 ಒಂದು ಎಕರೆಗೆ ರೂ.300/- ರಂತೆ ಒಟ್ಟು 6,000/- ರೂಗಳಿಗೆ 20 ಎಕರೆ ಪ್ರದೇಶವನ್ನು ಷರತ್ತುಬದ್ಧವಾಗಿ ಮಂಜೂರು ಮಾಡಲಾಗಿತ್ತು ಎಂದು ತಿಳಿಸಿದರು
2003ರಲ್ಲಿ 10 ಎಕರೆ ಪ್ರದೇಶವನ್ನು ದಿವಂಗತ ಬಾಲಕೃಷ್ಣ ಅವರ ಮಕ್ಕಳು ಸರ್ಕಾರದಿಂದ ಪೂರ್ವಾನುಮತಿ ಪಡೆದು ಮಾರಾಟ ಮಾಡಿರುತ್ತಾರೆ. ಮಾರಾಟಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿಯೂ ಮಾರಾಟದಿಂದ ಬಂದ ಹಣದಿಂದ ಸ್ಟುಡಿಯೋ ಅಭಿವೃದ್ಧಿ ಪಡಿಸುವಂತೆ ಮತ್ತೆ ಷರತ್ತು ಹಾಕಲಾಗಿರುತ್ತದೆ. ಆದರೆ ಈವರೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ. ಬದಲಾಗಿ ಈಗ ಉಳಿದ 10 ಎಕರೆ ಜಮೀನ್ನೂ ಮಾರಾಟ ಮಾಡಲು ಮುಂದಾಗಿರುವುದು ಷರತ್ತಿನ ಉಲ್ಲಂಘನೆಯಾಗಿದ್ದು, ಸದರಿ ಅರಣ್ಯ ಭೂಮಿಯನ್ನು ಇಲಾಖೆಗೆ ಮರಳಿಸುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.
ಸಸ್ಯೋದ್ಯಾನ ನಿರ್ಮಾಣ: ಬೆಂಗಳೂರು ವ್ಯಾಪಕವಾಗಿ ಬೆಳೆದಿದ್ದು, ಶ್ವಾಸತಾಣಗಳ ಅಗತ್ಯವಿದೆ. ಈ ಜಮೀನು ಇಲಾಖೆಗೆ ಮರಳಿ ಬಂದರೆ ಅಲ್ಲಿ ಒಂದು ಸಸ್ಯೋದ್ಯಾನ ನಿರ್ಮಿಸಲಾಗುವುದು ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ಕಳೆದ ಮೇ 15ರಂದು ಕಂದಾಯ ಇಲಾಖೆ ವಶದಲ್ಲಿರುವ ಅರಣ್ಯ ಭೂಮಿಯನ್ನು ಯಾವುದೇ ಸಂಸ್ಥೆ, ವ್ಯಕ್ತಿಗಳಿಗೆ ಮಂಜೂರು ಮತ್ತು ಗುತ್ತಿಗೆ ನೀಡಿದ್ದರೆ, ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದ್ದರೆ, ಅದರ ಪರಿಶೀಲನೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಸೂಚಿಸಿದೆ ಎಂದೂ ತಿಳಿಸಿದರು.
ಡಾ. ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಜಮೀನು ನೀಡಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರು ಮತ್ತು ಸರ್ಕಾರ ನಿಯಮಾನುಸಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.
ಮೀಸಲಾತಿಗೂ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೂ ಸಂಬಂಧ ಇಲ್ಲ: ಮೀಸಲಾತಿಗೂ, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೂ ಯಾವುದೇ ಸಂಬಂಧವಿಲ್ಲ, ಹೀಗಾಗಿ ವೀರಶೈವ ಲಿಂಗಾಯತರು ಗಣತಿ ವೇಳೆ ನೈಜ ಮಾಹಿತಿ ನೀಡುವಂತೆ ಮನವಿ ಮಾಡಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ಧರಿಸಿದೆ ಎಂದು ಮಹಾಸಭಾದ ಹಿರಿಯ ಉಪಾಧ್ಯಕ್ಷ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಮೀಸಲಾತಿ ದೊರಕಬಹುದು ಎಂದು ತಮ್ಮ ಉಪಜಾತಿಗೆ ಸಮೀಪದ ಮತ್ತೊಂದು ಜಾತಿಯ ಹೆಸರು ಬರೆಸುತ್ತಿದ್ದಾರೆ. ಈ ಸಮೀಕ್ಷೆಯ ವರದಿ ಗೌಪ್ಯವಾಗಿದ್ದು, ಇದರಿಂದ ಜಾತಿ ಪ್ರಮಾಣ ಪತ್ರ ಲಭಿಸುವುದಿಲ್ಲ ಎಂದು ತಿಳಿಸಿದರು.
ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ಶಾಮನೂರು ಶಿವಶಂಕರಪ್ಪ ಅವರ ಅನುಪಸ್ಥಿತಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿಯೇ ನಡೆದ ಸಚಿವರು, ಶಾಸಕರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸುಳ್ಳು ಸತ್ಯ ಆಗಲ್ಲ:ಬಿಜೆಪಿಯವರು ಧರ್ಮಸ್ಥಳ ವಿಚಾರದಲ್ಲಿ ಯಾತ್ರೆ ಮಾಡುತ್ತಾ ಮಿಥ್ಯಾರೋಪ ಮಾಡುತ್ತಿದ್ದಾರೆ, ಸುಳ್ಳು ಎಷ್ಟೇ ಸಾರಿ ಹೇಳಿದ್ರು ಅದು ಸತ್ಯ ಆಗಲು ಸಾಧ್ಯವಿಲ್ಲ ಎಂದು ಈಶ್ವರ ಖಂಡ್ರೆ ತಿರುಗೇಟು ನೀಡಿದರು.
ಧರ್ಮಸ್ಥಳದ ಬಗ್ಗೆ ನಮಗೂ ಗೌರವ ಇದೆ. ನಾವೂ ಮಂಜುನಾಥನ ಭಕ್ತರೇ, ನಮಗೂ ಭಕ್ತಿ ಗೌರವ ಎಲ್ಲವೂ ಇದೆ. ಜನರ ಮನದಲ್ಲಿ ಮೂಡಿದ ಶಂಕೆ ನಿವಾರಿಸುವ ಜವಾಬ್ದಾರಿ ಹೊತ್ತ ಸರ್ಕಾರ ನ್ಯಾಯಸಮ್ಮತವಾಗಿ ತನಿಖೆ ನಡೆಸುತ್ತಿದೆ. ಪಾರದರ್ಶಕವಾಗಿ ಎಲ್ಲ ಆಯಾಮದಲ್ಲೂ ತನಿಖೆ ನಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ. ನಾಟಕ ಮಾಡುವುದನ್ನು ನಿಲ್ಲಿಸಿ, ಸರ್ಕಾರದೊಂದಿಗೆ ಸಹಕರಿಸಲಿ ಎಂದರು.