ಧಾರವಾಡ : ಹುಬ್ಬಳ್ಳಿ ತಾಲೂಕಿನ ಇನಾಂವೀರಾಪೂರ ಗ್ರಾಮದಲ್ಲಿ ಜರುಗಿರುವ ಘಟನೆಗೆ ಸಂಬಂಧಿಸಿದಂತೆ ಅಂತರ್ಜಾತಿ ವಿವಾಹ ಆಗಿದ್ದ ಯುವತಿಯ ಹತ್ಯೆ ಮತ್ತು ದಲಿತ ಕುಟುಂಬದ ಮೇಲೆ ಆಗಿರುವ ದೌರ್ಜನ್ಯ ಕುರಿತು ಜಿಲ್ಲಾಡಳಿತದಿಂದ ಇಲಾಖೆಗಳು ಕೈಗೊಂಡ ಕ್ರಮಗಳ ಬಗ್ಗೆ ಪಾರದರ್ಶಕ ತನಿಖೆ ಕೈಗೊಂಡು ತ್ವರಿತವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಮತ್ತು ಇಂತಹ ದುರ್ಘಟನೆಗಳು ಜರುಗದಂತೆ ಇನ್ನಷ್ಟೂ ಕಠಿಣ ಕ್ರಮ ಕೈಗೊಳ್ಳಲು ಅಗತ್ಯವಿದ್ದರೆ, ಮುಂಬರುವ ಅಧಿವೇಶನದಲ್ಲಿ ವಿಶೇಷ ಕಾನೂನು ರಚನೆಗೆ ಕ್ರಮವಹಿಸಲಾಗುವುದು. ಈ ಕುರಿತು ಜಿಲ್ಲಾಡಳಿತ ವರದಿ ಸಲ್ಲಿಸಲಿ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿದರು.
ಆಧುನಿಕ ಸಾಮಾಜದಲ್ಲಿ ಇಂತಹ ಅಮಾನವೀಯ ಘಟನೆ ಜರುಗಬಾರದಾಗಿತ್ತು. ಘಟನೆಯ ಕುರಿತು ದೂರುಗಳು ಬಂದಿದ್ದು, ಸಮರ್ಪಕ ತನಿಖೆಗೆ ಆದೇಶಿಸಲಾಗಿದೆ. ಜಿಲ್ಲೆಯಲ್ಲಿ ಜರುಗಿರುವ ಅಂತರ್ಜಾತಿ ವಿವಾಹಗಳ ಕುರಿತು ಮಾಹಿತಿ ಪಡೆಯಬೇಕು. ಸಂಬಂಧಿಸಿದ ಇಲಾಖೆಗಳ ಸಮನ್ವಯ ಸಾಧಿಸಿ, ಜನರಿಗೆ ತಿಳುವಳಿಕೆ ಮತ್ತು ಮನವರಿಕೆ ಮಾಡಿ, ಸಂವಿಧಾನದ ಆಶಯಗಳನ್ನು ತಿಳಿಸಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ದೇಶದ ಕಾನೂನಿನ ಪ್ರಕಾರ ವಯಸ್ಸಿಗೆ ಬಂದ ಯುವಕ ಮತ್ತು ಯುವತಿಯರು ತಮ್ಮಿಷ್ಟದ ಸಂಗಾತಿಯನ್ನು ಮದುವೆಯಾಗಲು ಯಾವುದೇ ನಿಬರ್ಂಧಗಳಿಲ್ಲ ಎಂದು ಸಚಿವರು ಹೇಳಿದರು.
ಸಾಮಾನ್ಯವಾಗಿ ಇಂತಹ ಅಮಾನವೀಯ ಕೃತ್ಯಗಳು ಮತ್ತು ದೌರ್ಜನ್ಯ ಪ್ರಕರಣಗಳು ಉತ್ತರ ಭಾರತದಲ್ಲಿ ಅತಿ ಹೆಚ್ಚಾಗಿ ವರದಿಯಾಗುತ್ತಿದ್ದವು. ಆದರೆ, ಪ್ರಗತಿಪರ ಚಿಂತನೆಯ ದಕ್ಷಿಣ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ನಮ್ಮ ಕರ್ನಾಟಕದಲ್ಲಿ ಇಂತಹ ಘಟನೆ ಸಂಭವಿಸಿರುವುದು ವಿμÁದನೀಯ ಸಂಗತಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಮಾಜದಲ್ಲಿ ಶಾಂತಿ ನೆಲೆಸಲು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಸಂತ್ರಸ್ತರಿಗೆ ನ್ಯಾಯ ಒದಗಿಸಲು ಕಾನೂನುಬದ್ಧವಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.
ಇನಾಂವೀರಾಪೂರ ಪ್ರಕರಣದ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ, ಭದ್ರತೆ, ಪರಿಹಾರ ಕುರಿತು ಪೊಲೀಸ್ ಹಾಗೂ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಕುಟುಂಬದವರು ಪ್ರಕರಣದ ಕುರಿತು ತ್ವರಿತ ತನಿಖೆ, ಪುನರ್ವಸತಿ ಸೌಲಭ್ಯ, ಉದ್ಯೋಗ ಮತ್ತು ಭದ್ರತೆಯನ್ನು ಕೇಳಿದ್ದಾರೆ. ಈ ಕುರಿತು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರದ ಹಂತದಲ್ಲಿ ಚರ್ಚಿಸಿ, ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪ್ರಕರಣದ ತನಿಖೆಗಾಗಿ ವಿಶೇಷ ಅಭಿಯೋಜಕರ ನೇಮಕ, ತ್ವರಿತ ನ್ಯಾಯಾಲಯ ಸ್ಥಾಪನೆ ಮತ್ತು ದೊಡಮನಿ ಕುಟುಂಬಕ್ಕೆ ವಸತಿ, ಉದ್ಯೋಗ ಹಾಗೂ ಪರಿಹಾರ ಪ್ಯಾಕೇಜ್ ಸೇರಿದಂತೆ ವಿವಿಧ ಸೌಲಭ್ಯಗಳ ಪುನರ್ವಸತಿ ಕಲ್ಪಿಸುವ ಕುರಿತು ನಾಳೆಯ ಮಂತ್ರಿಮಂಡಳದ (ಕ್ಯಾಬಿನೆಟ್ ಮೀಟಿಂಗ್) ಸಭೆಯಲ್ಲಿ ಚರ್ಚಿಸಲಾಗುವುದು. ಮುಖ್ಯಮಂತ್ರಿಗಳು, ಕಾನೂನು ಸಚಿವರೊಂದಿಗೆ ಚರ್ಚಿಸಿ, ಈ ಕುರಿತು ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕರಾದ ಅಬ್ಬಯ್ಯ ಪ್ರಸಾದ ಅವರು ಮಾತನಾಡಿ, ಇನಾಂವೀರಾಪೂರ ಗ್ರಾಮದ ಘಟನೆ ಹಿನ್ನಲೆಯಲ್ಲಿ, ಇತರ ಸ್ಥಳಗಳಲ್ಲಿ ಇರುವ ಅಂತರ್ಜಾತಿ ವಿವಾಹವಾಗಿರುವ ಕುಟುಂಬಗಳಿಗೆ ಅಗತ್ಯ ಭದ್ರತೆ ಹಾಗೂ ಭರವಸೆ ಮೂಡಿಸಬೇಕು. ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಗಳನ್ನು ರೂಪಿಸಬೇಕು. ದೊಡಮನಿ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಅಗತ್ಯ ಸೌಲಭ್ಯಗಳನ್ನು ನೀಡಬೇಕೆಂದು ಹೇಳಿದರು.
ನವಲಗುಂದ ಶಾಸಕರಾದ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ಇನಾಂವೀರಾಪೂರ ಗ್ರಾಮದ ಘಟನೆ ಧಾರವಾಡ ಜಿಲ್ಲೆಯಲ್ಲಿ ಆಗಿರುವುದು ವಿಷಾದನೀಯ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಘಟನೆ ಜರುಗಿದ ದಿನದಿಂದ ಪೊಲೀಸ್, ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಗತ್ಯ ಕ್ರಮವಹಿಸಿವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಜರುಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ಅವರು ಹೇಳಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಿ. ರಂದೀಪ್ ಮತ್ತು ಆಯುಕ್ತ ಡಾ. ರಾಕೇಶಕುಮಾರ ಅವರು ಪ್ರಕರಣದ ತನಿಖೆ ಮತ್ತು ಸರ್ಕಾರದ ಕಾಯ್ದೆ, ಕಾನೂನುಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಇನಾಂವೀರಾಪೂರ ಗ್ರಾಮದ ಪ್ರಕರಣದಲ್ಲಿ ಎಲ್ಲ ಇಲಾಖೆಗಳು ಸೂಕ್ತ ಕ್ರಮ ವಹಿಸಿವೆ. ಜಿಲ್ಲಾಡಳಿತ, ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆ ನಿಯಮಾನುಸಾರ ಪರಿಹಾರ ಹಾಗೂ ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಲಾಗಿದ್ದು, ಅವರಿಗೆ ಬೇಕಾದ ದಿನಸಿ ಹಾಗೂ ಅವಶ್ಯಕ ಗೃಹೋಪಯೋಗಿ ಸಾಮಗ್ರಿಗಳನ್ನು ತಲುಪಿಸಲಾಗಿದೆ ಎಂದು ತಿಳಿಸಿದರು.
ಇನಾಂವೀರಾಪೂರ ಗ್ರಾಮದ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಘಟನೆಯ ದಿನದಿಂದ ಜಿಲ್ಲಾಡಳಿತದೊಂದಿಗೆ ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ಮಾಡುತ್ತಿವೆ. ಜಿಲ್ಲಾಡಳಿತದಿಂದ ಗ್ರಾಮದಲ್ಲಿ ಶಾಂತಿ ಸಭೆ ಜರುಗಿಸಿ, ಎಲ್ಲ ಸಮುದಾಯದವರು ಪರಸ್ಪರ ಶಾಂತಿ, ಸೌಹಾರ್ದತೆಯಿಂದ ಇರುವಂತೆ ಮನವರಿಕೆ ಮಾಡಿ ಭರವಸೆ ಮೂಡಿಸಲಾಗಿದೆ. ಅಲ್ಲದೇ ದೌರ್ಜನ್ಯಕ್ಕೆ ಒಳಗಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿದ್ದ ವಿವೇಕಾನಂದ ದೊಡಮನಿ ಕುಟುಂಬಸ್ಥರನ್ನು ಜಿಲ್ಲಾಡಳಿತ, ಪೊಲೀಸ ಇಲಾಖೆ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಮರಳಿ ಮನೆಗೆ ಸೇರಿಸಲಾಗಿದೆ. ಮತ್ತು ಗ್ರಾಮದ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅಂತರ್ಜಾತಿ ವಿವಾಹಕ್ಕೆ ಒಳಗಾದ ಯುವಕ, ಯುವತಿಯರ ಕುರಿತು ಕಂದಾಯ, ಸಮಾಜ ಕಲ್ಯಾಣ, ಪೊಲೀಸ್ ಹಾಗೂ ಪಂಚಾಯತ ರಾಜ್ ಇಲಾಖೆಗಳ ಸಮನ್ವಯ ಸಾಧಿಸಿ, ಪರಸ್ಪರ ಸಹಕಾರದಲ್ಲಿ ಇಂತಹ ಪ್ರಕರಣಗಳನ್ನು ನಿರ್ವಹಿಸಲು ಮತ್ತು ಗ್ರಾಮಗಳಲ್ಲಿ ಸಾರ್ವಜನಿಕ ತಿಳುವಳಿಕೆ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಅಧಿಕಾರಿಗಳಿಗೆ ತರಬೇತಿ ನೀಡಲು ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ ಎಂದು ಸಚಿವರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಮಾತನಾಡಿ, ಘಟನೆ ಜರುಗಿದ ತಕ್ಷಣ ಪೊಲೀಸ್ ಇಲಾಖೆ ಕ್ರಮವಹಿಸಿ, ವಿವೇಕಾನಂದ ದೊಡಮನಿ ಕುಟುಂಬವನ್ನು ರಕ್ಷಿಸಿ, ಅಗತ್ಯ ಚಿಕಿತ್ಸೆ ನೀಡಲು ಕ್ರಮವಹಿಸಿದೆ. ಯುವತಿಯನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ. ದೂರಿನಲ್ಲಿರುವ ಇತರ ಆರೋಪಿಗಳ ಬಂಧನಕ್ಕೂ ಕ್ರಮವಹಿಸಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಲಾಗಿದ್ದು, ರಕ್ಷಣೆಯ ಭರವಸೆಯನ್ನು ಮೂಡಿಸಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಆರೋಪ ಪಟ್ಟಿ (ಚಾರ್ಜ್ ಶೀಟ್) ತಯಾರಿಸಲಾಗುವುದು ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್ಇ) ಬೆಳಗಾವಿ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಗಡಾದ, ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ, ಪ್ರೋಬೇಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮಾ ಅವರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಡಿವೈಎಸ್ಪಿ ವಿನೋದ ಮುಕ್ತೆದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್.ಕುಕನೂರ, ಪ್ರಶಾಂತ ಸಿದ್ದನಗೌಡರ ಸೇರಿದಂತೆ ಅವಳಿ ನಗರದ ಎಲ್ಲ ಸಹಾಯಕ ಪೊಲೀಸ್ ಆಯುಕ್ತರು, ಪೊಲೀಸ್ ಇನ್ಸೆಪೆಕ್ಟರ್ ಮುರಗೇಶ ಚನ್ನಣ್ಣವರ, ಎಲ್ಲ ತಾಲೂಕಿನ ತಹಶೀಲ್ದಾರರು, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಭಾಗವಹಿಸಿದ್ದರು.


